ADVERTISEMENT

ಬೆಡಗಿನ ಶ್ವಾನಗಳ ಬಿನ್ನಾಣ!

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 9:16 IST
Last Updated 1 ಸೆಪ್ಟೆಂಬರ್ 2014, 9:16 IST

ಮೈಸೂರು: ಕೆನೈನ್‌ ಕ್ಲಬ್‌ ಆಫ್‌ ಮೈಸೂರು ವತಿಯಿಂದ ಮೊದಲ ರಾಷ್ಟ್ರೀಯಮಟ್ಟದ ಶ್ವಾನ ಸ್ಪರ್ಧೆ ಮತ್ತು ಮೈಸೂರು ಕೆನೈನ್‌ ಕ್ಲಬ್‌, ಬೆಂಗಳೂರು ವತಿಯಿಂದ ಅಖಿಲ ಭಾರತ ಶ್ವಾನಗಳ ಚಾಂಪಿಯನ್‌ಷಿಪ್‌ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ನಡೆಯಿತು.

ಮೈಸೂರಿನ 83, ಬೆಂಗಳೂರಿನ 45 ನಾಯಿಗಳು ಸೇರಿದಂತೆ ವಿವಿಧ ರಾಜ್ಯಗಳಿಂದ 35 ತಳಿಯ 357 ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ₨ 20 ಸಾವಿರದಿಂದ ₨ 26 ಲಕ್ಷ ಮೌಲ್ಯದ ಶ್ವಾನಗಳು ಮೈಮಾಟ ಪ್ರದರ್ಶಿಸಿದವು. ಚೆನ್ನೈನ ಗೋಪಾಲಕೃಷ್ಣ ಅವರ ₨ 26 ಲಕ್ಷ ಮೌಲ್ಯದ ‘ಇಂಗ್ಲಿಷ್‌ ಶೆಟರ್‌’ ತಳಿಯ ನಾಯಿ ಸ್ಪರ್ಧೆಯ ಕೇಂದ್ರಬಿಂದುವಾಗಿತ್ತು.

ಒಂದೂವರೆ ಕೆ.ಜಿ ತೂಕದಿಂದ 136 ಕೆ.ಜಿ ತೂಕವುಳ್ಳ ನಾಯಿಗಳು ಗಮನ ಸೆಳೆದವು. ಮೈಕ್ರೋಚಿಪ್‌ ಅಳವಡಿಸಿದ್ದ ನಾಯಿಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಮುಧೋಳ, ರಾಜ್ಯಪಾಳಿ ಸೇರಿದಂತೆ ದೇಸಿ ತಳಿಯ 17 ನಾಯಿಗಳಿಗೆ ಪ್ರವೇಶ ಉಚಿತವಾಗಿತ್ತು.
ಭಾರತಕ್ಕೆ ಇತ್ತೀಚೆಗೆ ಬಂದಿರುವ ಹೊಸ ತಳಿಗಳಾದ ಆಕಿಟಾ (ಜರ್ಮನಿ), ಚೌಚೌ (ಬ್ರೆಜಿಲ್‌), ನ್ಯೂ ಫೌಂಡ್‌ ಲ್ಯಾಂಡ್‌ ನಾಯಿಗಳು ಸ್ಪರ್ಧೆಯಲ್ಲಿ  ವಿಶೇಷ ಗಮನ ಸೆಳೆದವು.

ತೀರ್ಪುಗಾರರಾಗಿ ಆಸ್ಟ್ರೇಲಿಯಾದ ಯಾವೋನ್‌ ಮಿಂಟಿಜೆಸ್‌, ಎಡ್ವೀನಾ ಥಾಮಸ್‌, ಚೆನ್ನೈನ ಸಿ.ವಿ. ಸುದರ್ಶನ್‌, ಬೆಂಗಳೂರಿನ ಟಿ. ಪ್ರೀತಂ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ನಾಯಿಯ ತಳಿ, ಬಣ್ಣ, ಕೂದಲು, ಹಲ್ಲು, ಆರೋಗ್ಯ, ಚಟುವಟಿಕೆ, ನಿಲ್ಲುವ ಭಂಗಿ, ಹಾವಭಾವ ಮತ್ತಿತರ ಅಂಶಗಳನ್ನು ಪರಿಗಣಿಸಲಾಯಿತು.

ಪ್ರಸಿದ್ಧ ತಳಿಗಳಾದ ಲ್ಯಾಬ್ರಡಾರ್‌,  ಗೋಲ್ಡನ್‌ ರಿಟ್ರೀವರ್‌, ಡಾಬರ್‌ಮನ್‌, ಡ್ಯಾಶುಂಡ್‌, ಸೇಂಟ್‌ ಬರ್ನಾರ್ಡ್‌ ಹೆಜ್ಜೆ ಹಾಕಿ ಗಮನ ಸೆಳೆದವು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಶ್ವಾನಸ್ಪರ್ಧೆಯಲ್ಲಿ ದೇಸಿ ತಳಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು. ಈ ಬಾರಿಯ ಸ್ಪರ್ಧೆಯನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಅರ್ಪಣೆ ಮಾಡಿರುವುದು ಸ್ವಾಗತಾರ್ಹ ಎಂದರು.

ಪ್ರಮೋದಾದೇವಿ ಒಡೆಯರ್‌ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿದ್ದರಾಜು,
ಎಲ್‌. ನಾಗೇಂದ್ರ, ಸಿ.ವಿ. ಸುದರ್ಶನ್‌, ಗುಬ್ಬಿಗೂಡು ರಮೇಶ್‌, ಬಿಳಿಗಿರಿ ರಂಗನಾಥ್‌, ಫಾದರ್ ಎಸ್‌.ಡಿ. ಜೋಸೆಫ್‌, ಡಾ.ರಾಜಶೇಖರ್‌ ಇದ್ದರು.

ಫೆಬ್ರುವರಿಯಲ್ಲಿ ಮತ್ತೆ ಸ್ಪರ್ಧೆ
ಕೆನೈನ್‌ ಕ್ಲಬ್‌ ಆಫ್‌ ಮೈಸೂರು ವತಿಯಿಂದ ಮೊದಲ ಬಾರಿ ರಾಷ್ಟ್ರೀಯ ಮಟ್ಟದ ಶ್ವಾನ ಸ್ಪರ್ಧೆ ಆಯೋಜಿಸಲಾಗಿದೆ. ನಾವು ಚಾಂಪಿಯನ್‌ಷಿಪ್ ಮಾನ್ಯತೆ ಪಡೆಯಲು ಮೂರು ಶ್ವಾನ ಸ್ಪರ್ಧೆ ಯಶಸ್ವಿಯಾಗಿ ನಡೆಸಬೇಕಾಗುತ್ತದೆ. ಹೀಗಾಗಿ, ಫೆಬ್ರುವರಿಯಲ್ಲಿ ಮತ್ತೆ ಶ್ವಾನ ಸ್ಪರ್ಧೆ ಆಯೋಜಿಸಲಾಗುವುದು.
– ಬಿ.ಪಿ. ಮಂಜುನಾಥ್‌, ಅಧ್ಯಕ್ಷ, ಕೆನೈನ್‌ ಕ್ಲಬ್‌ ಆಫ್‌ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT