ADVERTISEMENT

ಮತ್ತೆ ತುಂಬಿದ ತಿಪ್ಪಯ್ಯನಕೆರೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 7:15 IST
Last Updated 20 ಆಗಸ್ಟ್ 2017, 7:15 IST
ಮೈಸೂರು ಹೊರವಲಯದ ತಿಪ್ಪಯ್ಯನ ಕೆರೆಯು ನೀರಿಲ್ಲದೇ ಸುಂಡುಹೋಗಿದ್ದ ಚಿತ್ರ
ಮೈಸೂರು ಹೊರವಲಯದ ತಿಪ್ಪಯ್ಯನ ಕೆರೆಯು ನೀರಿಲ್ಲದೇ ಸುಂಡುಹೋಗಿದ್ದ ಚಿತ್ರ   

ಮೈಸೂರು: ನಂಜನಗೂಡು– ಊಟಿ ಹೊರವರ್ತುಲ ರಸ್ತೆಯ ತಿಪ್ಪಯ್ಯನ ಕೆರೆಗೆ ಮತ್ತೆ ನೀರು ತುಂಬಿದೆ. ಕೆರೆಯ ಹೂಳು ತೆಗೆದು ಬೆಳೆದಿದ್ದ ಸತ್ತೆಯನ್ನು ತೆರವುಗೊಳಿಸಿ ಕೆರೆಯನ್ನು ಜೀವಂತಿಕೆಯಿಂದ ನಳನಳಿಸುವಂತೆ ಮಾಡಲಾಗಿದೆ.

ಜಿಲ್ಲಾಡಳಿತ ನೇತೃತ್ವದಲ್ಲಿ ಸಾಮಾಜಿಕ ಕಾರ್ಪೊರೇಟ್‌ ಹೊಣೆಗಾರಿಕೆ (ಸಿ ಎಸ್‌ ಆರ್‌) ಯೋಜನೆಯ ಅಡಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಹಾಗೂ ಆಟೊಮೆಟಿವ್‌ ಆಕ್ಸಿಲ್ಸ್‌ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವನ ಕಾರ್ಯ ನಡೆಸಲಾಗಿದೆ. 6 ತಿಂಗಳಿಗೂ ಹೆಚ್ಚಿನ ಸಿದ್ಧತೆಯನ್ನು ನಡೆಸಿರುವ ಈ ಸಂಸ್ಥೆಗಳು ಕೆರೆಯಲ್ಲಿ ನೀರಿನ ಸೆಲೆ ಬರುವಂತೆ ಮಾಡಿವೆ.

₹ ಕೋಟಿ ವೆಚ್ಚದ ಈ ಯೋಜನೆಯಲ್ಲಿ ನಗರದ ನಾಲ್ಕು ಕೆರೆಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಮೊದಲ ಭಾಗವಾಗಿ ₹ 30 ಲಕ್ಷ ವೆಚ್ಚದಲ್ಲಿ ಹೂಳು ತೆಗೆದು, ಕಳೆಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ, ಕೆರೆ ನೀರಿನ ಹರಿವು ಬರುವಂತೆ ಕಿರು ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದರ ಫಲವಾಗಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯು ನೀರಿನಿಂದ ತುಂಬಿ ತುಳುಕುತ್ತಿದೆ.

ADVERTISEMENT

ಕೆರೆಗೆ ವಾಯುವಿಹಾರಕ್ಕಾಗಿ ಪಾದಚಾರಿ ರಸ್ತೆ ನಿರ್ಮಿಸುವುದು, ಹಸಿರೀಕರಣ ಹಾಗೂ ಬೇಲಿ ನಿರ್ಮಾಣ ಕಾರ್ಯ ಬಾಕಿ ಇದೆ. ಇವೆಲ್ಲವನ್ನೂ ಶೀಘ್ರವೇ ಮುಗಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕರಾದ ಜಿಲ್ಲಾ ಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕ ಎಚ್‌.ರಾಮಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಯೋಜನೆಯ ಮುಂದುವರಿದ ಭಾಗವಾಗಿ ತಾವರೆಕೆರೆ, ಕೆಂಪಯ್ಯನ ಕಟ್ಟೆ ಹಾಗೂ ದೇವಿಕೆರೆಯನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.