ADVERTISEMENT

ಮತ್ತೆ ₹ 18 ಕೋಟಿ ಕಾಮಗಾರಿಗೆ ಪ್ರಸ್ತಾವ

ನಾಲ್ಕು ವರ್ಷ ಕಳೆದರೂ ಪೂರ್ಣಗೊಳ್ಳದ ಅಂಬೇಡ್ಕರ್‌ ಭವನ

ಕೆ.ಓಂಕಾರ ಮೂರ್ತಿ
Published 10 ಜನವರಿ 2017, 10:22 IST
Last Updated 10 ಜನವರಿ 2017, 10:22 IST
ಮೈಸೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರಿನಲ್ಲಿ ನಿರ್ಮಿಸುತ್ತಿರುವ ‘ಅಂಬೇಡ್ಕರ್‌ ಭವನ’ದ ಕಾಮಗಾರಿ ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ಕ್ರಿಯಾ ಯೋಜನೆ ಬದಲಾಯಿಸಿ ಹೆಚ್ಚುವರಿ ಕಾಮಗಾರಿಗೆಂದು ಮತ್ತೆ ₹ 18 ಕೋಟಿ ಪ್ರಸ್ತಾವ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
 
ನಗರದ ದೇವರಾಜ ಮೊಹಲ್ಲಾದ ದೇವರಾಜ ಪೊಲೀಸ್‌ ಠಾಣೆ ಸಮೀಪ 7,470 ಚದರ ಮೀಟರ್‌ ವಿಸ್ತೀರ್ಣ ಜಾಗದಲ್ಲಿ ಈಗಾಗಲೇ ₹ 14.6 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 
 
ರಾಜ್ಯದಲ್ಲೇ ದೊಡ್ಡ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ 2012ರ ಮೇ 4ರಂದು ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಬೇಸ್‌ಮೆಂಟ್‌, ನೆಲ ಮಹಡಿ, ಮೊದಲ ಅಂತಸ್ತು ಹಾಗೂ ಎರಡನೇ ಮಹಡಿ ನಿರ್ಮಿಸಲು ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. 
 
‘ಯೋಜನೆ ರೂಪಿಸುವಾಗ ಬಯಲು ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಸುತ್ತಮುತ್ತ ವಾಹನಗಳ ಓಡಾಟ ಶಬ್ದದಿಂದ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಬಹುದು ಎಂಬ ಕಾರಣಕ್ಕೆ ಒಳಾಂಗಣ ಸಭಾಂಗಣ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಹೀಗಾಗಿ, ಆ ಕಾಮಗಾರಿಗೆ ಹೆಚ್ಚುವರಿಯಾಗಿ ₹ 18 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಬಿ.ಎಸ್‌.ಪ್ರಭಾ ‘ಪ್ರಜಾವಾಣಿ’ಗೆ ತಿಳಿಸಿದರು. 
 
ಹೊಸ ಪ್ರಸ್ತಾವದಲ್ಲಿ ಒಳಾಂಗಣ ಸಭಾಂಗಣಕ್ಕೆ ಹವಾನಿಯಂತ್ರಣ ವ್ಯವಸ್ಥೆ, ಕುಷನ್‌ ಆಸನ, ಸಿ.ಸಿಟಿ.ವಿ ಕ್ಯಾಮೆರಾ, ಬೆಳಕು ಮತ್ತು  ಧ್ವನಿವರ್ಧಕ ಸೌಲಭ್ಯ ಹಾಗೂ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆಯೂ ಸೇರಿವೆ. 
 
‘ಶೇ 90ರಷ್ಟು ಕಾಮಗಾರಿ ಮುಗಿದಿದೆ. ಭವನದ ಗೋಪುರ ವಿನ್ಯಾಸ ಸಮಸ್ಯೆಯಿಂದ ಕೊಂಚ ವಿಳಂಬವಾಗಿದೆ. ನೆಲಹಾಸು ಹಾಕಬೇಕಿದೆ. ಮೊದಲ ಹಂತದ ಕಾಮಗಾರಿ ಫೆಬ್ರುವರಿ ಮೊದಲ ವಾರದಲ್ಲಿ ಮುಗಿಯಲಿದೆ. ಉದ್ಘಾಟನೆ ಬಳಿಕ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಅದಕ್ಕೆ ಒಂದು ವರ್ಷ ಹಿಡಿಯಲಿದೆ’ ಎಂದು ಮುಡಾ ಎಂಜಿನಿಯರ್‌ ಮಾಹಿತಿ ನೀಡಿದರು. 
 
ಸಮಾಜ ಕಲ್ಯಾಣ ಇಲಾಖೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಭವನದ ಸಭಾಂಗ ಣದಲ್ಲಿ 2,500 ಆಸನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಗ್ರಂಥಾ ಲಯ, ಸಂಶೋಧನಾ ಕೇಂದ್ರ, ಎರಡು ಗ್ರೀನ್‌ ರೂಂ, ವಿಶ್ರಾಂತಿ ಕೊಠಡಿ, ಶೌಚಾ ಲಯ, ಬೇಸ್‌ಮೆಂಟ್‌ನಲ್ಲಿ 150 ಕಾರು ಹಾಗೂ 350 ಬೈಕ್‌ ನಿಲುಗಡೆಗೆ ವ್ಯವಸ್ಥೆ ಒದಗಿಸಲು ಯೋಜನೆ ರೂಪಿಸಲಾಗಿದೆ. 
 
**
ಕೆಲ ದಿನಗಳ ಹಿಂದೆಯಷ್ಟೇ ₹ 18 ಕೋಟಿ ಬಿಡುಗಡೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಹೀಗಾಗಿ, ಭವನ ನಿರ್ಮಾಣ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಹಿಡಿಯಲಿದೆ.
-ಬಿ.ಎಸ್‌.ಪ್ರಭಾ,
ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.