ADVERTISEMENT

ಮುಖ್ಯಮಂತ್ರಿಯಿಂದ ಇಫ್ತಾರ್‌ಕೂಟ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:09 IST
Last Updated 24 ಜೂನ್ 2017, 9:09 IST
ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಫ್ತಾರ್‌ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರಿಯಾನಿ ಬಡಿಸಿದರು
ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಫ್ತಾರ್‌ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರಿಯಾನಿ ಬಡಿಸಿದರು   

ಮೈಸೂರು: ರಂಜಾನ್‌ ಅಂಗವಾಗಿ ನಗರದ ಸಿದ್ದಿಖಿ ಮೊಹಲ್ಲಾದ ಪ್ರೆಸ್ಟೀಜ್ ಕನ್ವೆನ್ಷನ್‌ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಆಯೋಜಿಸಿದ್ದ ಇಫ್ತಾರ್‌ ಕೂಟಕ್ಕೆ ಚಾಲನೆ ಶುಕ್ರವಾರ ನೀಡಲಾಯಿತು.

ಮೈಸೂರಿನ ಸರ್ಖಾಜಿ ಉಸ್ಮಾನ್ ಷರೀಫ್ ಅವರು ಪ್ರಾರ್ಥನೆ ಮೂಲಕ ಇಫ್ತಾರ್ ಕೂಟಕ್ಕೆ ಚಾಲನೆ ನೀಡಿದರು. ನೆರೆದಿದ್ದ ಸಾವಿರಾರು ಮುಸ್ಲಿಮರು ಫಲಾಹಾರ ಸೇವಿಸಿ ಉಪವಾಸ ಕೈ ಬಿಟ್ಟರು. ನಂತರ, ಎಲ್ಲರೂ ಬಿರಿಯಾನಿ ಭೋಜನ ಸವಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ತನ್ವೀರ್‌ ಸೇಠ್ ಮತ್ತು ಶಾಸಕ ರಿಜ್ವಾನ್ ಹರ್ಷದ್ ಖರ್ಜೂರ ತಿನ್ನಿಸಿದರು. ಗಣ್ಯರನ್ನೂ ಸೇರಿದಂತೆ ಮುಸ್ಲಿಂ ಸಮುದಾಯದ ಸದಸ್ಯರು ಬಿರಿಯಾನಿ, ಪರೋಟ, ಚಿಕನ್ ಗ್ರೇವಿ, ಚಿಕನ್ ಕಬಾಬ್ ಸೇರಿದಂತೆ ಸಿಹಿ ಸವಿದರು. ಕೂಟದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ADVERTISEMENT

ಭೋಜನದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘24 ವರ್ಷದಿಂದ ನಾನು ಇಫ್ತಾರ್‌ ಕೂಟ ಆಯೋಜಿಸುತ್ತಿದ್ದೇನೆ. ಮುಸ್ಲಿಮರು ರಂಜಾನ್ ವೇಳೆ ಒಂದು ತಿಂಗಳು ಬೆಳಗಿನ ವೇಳೆ ಉಪವಾಸ ಮಾಡಿ ಸರ್ವ ಧರ್ಮದವರ ಹಿತಕ್ಕಾಗಿ ಪ್ರಾರ್ಥಿಸುತ್ತಾರೆ. ರಾಜ್ಯದಲ್ಲಿ ಮಳೆಯಿಲ್ಲ, ಬರಗಾಲ ಬಂದಿದೆ. ಎಲ್ಲರೂ ಮಳೆಗಾಗಿ ಪ್ರಾರ್ಥಿಸಿ’ ಎಂದು ಕೋರಿದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‌ ಸೇಠ್, ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ವಾಸು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷ ಡಿ.ಧ್ರುವ ಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಜಿಲ್ಲಾಧಿಕಾರಿ ಡಿ.ರಂದೀಪ್‌, ಎಸ್ಪಿ ರವಿ ಡಿ.ಚೆನ್ನಣ್ಣನವರ್‌, ಕಾಂಗ್ರೆಸ್‌ ಮುಖಂಡರಾದ ಪುಷ್ಪಾ ಅಮರನಾಥ್, ಸತ್ಯನಾರಾಯಣ, ಮಂಜುಳಾ ಮಾನಸ, ನಗರಪಾಲಿಕೆ ಸದಸ್ಯರಾದ ಜೆ.ಎಸ್.ಜಗದೀಶ್, ಸುಹೇಲ್‌ ಬೇಗ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.