ADVERTISEMENT

ಮೈಮುಲ್‌ಗೆ ₹ 32 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:46 IST
Last Updated 9 ಜನವರಿ 2017, 8:46 IST

ಹುಣಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳಿಂದ ಶೇಖರಿಸಿ ಸಂಸ್ಕರಿಸಿದ ಹಾಲಿನಿಂದ ಈ ಬಾರಿ ಮೈಮುಲ್ ₹ 32 ಕೋಟಿ ಲಾಭಗಳಿಸಿದೆ ಎಂದು ಮೈಮುಲ್‌ ನಿರ್ದೇಶಕ  ಕೆ.ಎಸ್‌.ಕುಮಾರ್‌ ಹೇಳಿದರು.

ನಗರದ ಹಾಲು ಶೀತಲೀಕರಣ ಘಟಕದಲ್ಲಿ ರೈತರಿಗೆ ಹುಲ್ಲು ಕತ್ತರಿಸುವ ಯಂತ್ರ ವಿತರಿಸಿ ಅವರು ಭಾನುವಾರ ಮಾತನಾಡಿದರು.
ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ 6 ಲಕ್ಷ ಲೀಟರ್‌ ಹಾಲು ಶೇಖರಿಸಲಾ ಗುತ್ತಿದ್ದು, ಈ ಪೈಕಿ 1.50 ಲಕ್ಷ ಲೀಟರ್ ಸ್ಥಳೀಯವಾಗಿ ಮಾರಾಟ ಆಗುತ್ತಿದೆ. 2.50 ಲಕ್ಷ ಲೀಟರ್‌ ಹಾಲನ್ನು ಪ್ಯಾಕೆಟ್‌ ಮಾಡಲಾಗುತ್ತಿದ್ದು, 50 ಸಾವಿರ ಲೀಟರ್‌ ತಿಂಡಿ ತಿನಿಸುಗಳಿಗೆ, ಉಳಿದ 1.50 ಲಕ್ಷ ಲೀಟರ್‌ ಹಾಲು ಪುಡಿ ರೂಪ ದಲ್ಲಿ ಮಾರಾಟ ಆಗುತ್ತಿದೆ ಎಂದರು.

ಕ್ಷೇಮಾಭಿವೃದ್ಧಿ: ಮೈಮುಲ್‌ಗಳಿಸುವ ಲಾಭದಲ್ಲಿ ಸಂಘದ ಸದಸ್ಯರ ಹಿತ ಕಾಪಾಡುವುದರ ಜತೆಗೆ ಜನಪರ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ರೈತರಿಗೆ ಪ್ರತಿ ಲೀಟರ್‌ಗೆ ಮೈಮುಲ್‌ ವತಿಯಿಂದ ₹ 25 ನೀಡುತ್ತಿದ್ದು, ಇದಕ್ಕೆ ಸರ್ಕಾರದಿಂದ ₹ 5 ಸೇರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 997 ಸಂಘಗಳು ಹಾಲು ಉತ್ಪಾಧಿಸುತ್ತಿದ್ದು ಈ ಪೈಕಿ 638 ಸಾಮಾನ್ಯ ಸಂಘಗಳು, 359 ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದರು.

ರೈತ ಕಲ್ಯಾಣ ಯೋಜನೆ ಅಡಿಯಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣ ಸೌಲಭ್ಯ, ಹಸುಗಳ ರಕ್ಷಣೆಗೆ ವೈದ್ಯಕೀಯ ಸೌಲಭ್ಯ, ಆಹಾರ, ಹುಲ್ಲು ಕತ್ತರಿಸುವ ಯಂತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉತ್ಪಾದಕರಿಗೆ ಮೈಮುಲ್‌ ನೀಡಿದೆ ಎಂದರು.

ಅಭಿನಂದನೆ: ಎಪಿಎಂಸಿ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿ ರುವ ಅಸ್ವಾಳು ಕೆಂಪೇಗೌಡ, ಶ್ರೀಗೌಡ ಅವರನ್ನು ಅಭಿನಂದಿಸ ಲಾಯಿತು.
ಬಸವಲಿಂಗಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಸವರಾಜಪ್ಪ, ರಮೇಶ್‌, ಮಹದೇವಮ್ಮ, ಮೈಮುಲ್ ಉಪ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಗೌತಮ್ ಇತರರು ಇದ್ದರು.

ಪ್ರಶಸ್ತಿ
ಮೈಸೂರು: ಕೌಟಿಲ್ಯ ವಿದ್ಯಾಲವು ನೀಡುವ ಕೌಟಿಲ್ಯ ವಿದ್ಯಾರತ್ನ ಪ್ರಶಸ್ತಿಗೆ ಸಂಸ್ಥೆಯ ಶಿಕ್ಷಕರಾದ ವಿ.ಶ್ರೀಧರ, ಮಹಮ್ಮದ್‌ ಹುಮಾಯೂನ್‌, ಸಿ.ಎಸ್‌. ತನುಜಾ, ಕೆ.ವಿ.ಸಂಗೀತಾ ಆಯ್ಕೆಯಾಗಿ ದ್ದಾರೆ.  ಈ ಪ್ರಶಸ್ತಿ ₹ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಜ. 7ರಂದು ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾ ಗುವುದು ಎಂದು ಪ್ರಾಂಶುಪಾಲರಾದ ಡಾ.ಎಲ್‌.ಸವಿತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.