ADVERTISEMENT

ವಿರೋಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:43 IST
Last Updated 11 ನವೆಂಬರ್ 2017, 8:43 IST

ಹುಣಸೂರು: ಟಿಪ್ಪು ಜಯಂತಿ ವಿರೋಧಿಸುವವರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಶಾಸಕ ಮಂಜುನಾಥ್ ಹೇಳಿದರು. ನಗರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸದಲ್ಲಿ ಟಿಪ್ಪು ಕೊಡುಗೆ ಕುರಿತು ಪ್ರತಿಯೊಂದು ದಾಖಲೆ ಇದ್ದರೂ ಜನಸಾಮಾನ್ಯರ ದಾರಿತಪ್ಪಿಸುವ ಕೆಲಸ ನಡೆಸಲಾಗಿದೆ. ಜಾತಿಯ ವಿಷಬೀಜ ಬಿತ್ತಿ ಅಶಾಂತಿ ಉಂಟು ಮಾಡುತ್ತಿರುವ ವಿರೋಧ ಪಕ್ಷದವರು ಟಿಪ್ಪು ಜಯಂತಿಯನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರನ್ನು ಒಪ್ಪಿಕೊಂಡ ಬಿಜೆಪಿ ಟಿಪ್ಪು ವಿರೋಧಿಸುತ್ತಿರುವುದಾದರೂ ಏಕೆ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ವ್ಯಕ್ತಿ ಎಂದು ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 1994ರಲ್ಲಿ ದಲಿತ ಸಂಘರ್ಷ ಸಮಿತಿ, ರೈತ ಸಂಘ ಮತ್ತು ಮುಸ್ಲಿಂ ಸಂಘಟನೆಗಳು ಒಗ್ಗೂಡಿ ಟಿಪ್ಪು ಜಯಂತಿ ಹುಟ್ಟು ಹಾಕಿದವು. ಆದರೆ, ಈ ಹಿಂದಿನ ಸರ್ಕಾರಗಳು ಟಿಪ್ಪು ಜಯಂತಿ ಆಚರಿಸುವ ಸಾಮರ್ಥ್ಯ ಇಲ್ಲದೆ ಮೌನವಾಗಿದ್ದವು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ನಿವೃತ್ತ ಉಪನ್ಯಾಸಕ ಸಿದ್ದೇಗೌಡ, ಟಿಪ್ಪು ವಿಶ್ವದಲ್ಲೇ ಮೊದಲು ರಾಕೆಟ್‌ ತಂತ್ರಜ್ಞಾನ ಬಳಸಿ ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದ್ದ ವ್ಯಕ್ತಿ. ಟಿಪ್ಪು ಹತ್ಯೆ ಬಳಿಕ ಆತನ ಬಳಿ ಇದ್ದ 700 ರಾಕೆಟ್‌ ಮತ್ತು 900 ರಾಕೆಟ್‌ ಬಿಡಿಭಾಗಗಳನ್ನು ಇಂಗ್ಲೆಂಡ್ ಗೆ ಸಾಗಿಸಿ ಫ್ರೆಂಚ್‌ ದೇಶದ ಮೇಲೆ ಬಳಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ ಎಂದರು.

ಟಿಪ್ಪು ಸುಲ್ತಾನ್‌ ಭೂ ಸುಧಾರಣೆಯಲ್ಲಿ ಕ್ರಾಂತಿಕಾರಿ ಕಾಯ್ದೆ ಜಾರಿಗೊಳಿಸಿ ಬಡವರು ಮತ್ತು ದಲಿತರಿಗೆ ಭೂಮಿ ಕೊಡಿಸುವಲ್ಲಿ ಸಫಲರಾಗಿದ್ದರು. ವಾಣಿಜ್ಯ ಬೆಳೆ ರೇಷ್ಮೆ ರಾಜ್ಯಕ್ಕೆ ತಂದವರು, ಸಕ್ಕರೆ ತಂತ್ರಜ್ಞಾನ ತರುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್‌, ಮುಖಂಡರಾದ ಸಿ.ಟಿ.ರಾಜಣ್ಣ, ಸೋಮಶೇಖರ್, ನಗರಸಭಾಧ್ಯಕ್ಷ ಕೆ.ಲಕ್ಷ್ಮಣ್‌, ಟಿಪ್ಪು ಜಯಂತಿ ಸಮಿತಿ ಅಧ್ಯಕ್ಷ ನಯಾಜ್‌ ಪಾಷಾ, ಮೌನಾಲಾ ಖಯಾಮುದ್ದಿನ್‌ ಇದ್ದರು. ಸಂಸದ ಪ್ರತಾಪಸಿಂಹ ಟಿಪ್ಪು ಜಯಂತಿ ವಿರೋಧಿಸಿದ್ದರೂ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಮುದ್ರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.