ADVERTISEMENT

ವಿವೇಕ ಜಾಗೃತವಾಗಿದ್ದರೆ ಅನಾಹುತ ದೂರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:24 IST
Last Updated 16 ಜನವರಿ 2017, 6:24 IST
ವಿವೇಕ ಜಾಗೃತವಾಗಿದ್ದರೆ ಅನಾಹುತ ದೂರ
ವಿವೇಕ ಜಾಗೃತವಾಗಿದ್ದರೆ ಅನಾಹುತ ದೂರ   

ಮೈಸೂರು: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಆದರೆ, ಅವುಗಳು ನಮ್ಮನ್ನು ಬಳಸಿಕೊಳ್ಳುವಂತೆ ಆಗಬಾರದು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಇಲ್ಲಿ ಸಲಹೆ ನೀಡಿದರು.

ಇಲ್ಲಿನ ರಂಗಾಯಣದಲ್ಲಿ ನಡೆಯು­ತ್ತಿರುವ ‘ಬಹುರೂಪಿ’ ಅಂತರ­ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಭಾನುವಾರ ನಡೆದ ‘ರಂಗಭೂಮಿ ಮತ್ತು ತಂತ್ರಜ್ಞಾನ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ವರ್ತನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದ ಜವಾಬ್ದಾರಿ ನಮ್ಮದು. ಸಾಮಾಜಿಕ ವಿವೇಕದ ಭಾಗವಾದ ನಮ್ಮ ವಿವೇಕ ಜಾಗೃತವಾಗಿದ್ದರೆ ಸಾಮಾಜಿಕ ಮಾಧ್ಯಮಗಳು ಬಂದರೂ ದೊಡ್ಡ ಪ್ರಮಾಣದ ಅನಾಹುತಗಳು ಆಗಲು ಸಾಧ್ಯವಿಲ್ಲ. ಹಿಂದೆಯೂ ಬೇಕಾದಷ್ಟು ಇಂಥ ಅನಾಹುತಗಳು ಬಂದಿವೆ. ಇಂದಿಗೂ ಮಾನವ ಮೌಲ್ಯಗಳು ಉಳಿದಿವೆ. ಹೋರಾಟ ಮಾಡುವ ಜನ ಇದ್ದಾರೆ. ಬುದ್ಧ, ಅಂಬೇಡ್ಕರ್‌ ಜತೆಗೆ ಪೆರಿಯಾರ್‌ ಸಂಯೋಜನೆಯೇ ಹೋರಾಟದ ವ್ಯಾಕರಣ­ವನ್ನಾಗಿ ನಿರ್ಧಾರ ಮಾಡಬೇಕು’ ಎಂದರು.

‘ಸಾಹಿತ್ಯ, ಕಾವ್ಯ, ನಾಟಕಕ್ಕೆ ಅಗಾಧವಾದ ಸಾಧ್ಯತೆಯ ಪರಿಸ್ಥಿತಿ ಇದೆ. ಈ ದಿಕ್ಕಿನೊಳಗೆ ಕೆಲಸ ಮಾಡಬೇಕು. ಅಂಧಕಾರದಲ್ಲೂ ನಾವು ಸ್ಥಳವನ್ನು ಸೃಷ್ಟಿ ಮಾಡಬೇಕು. ದೇಶದ ಬಗ್ಗೆ ಪ್ರೀತಿ ಇರಬೇಕು. ಆದರೆ, ಯಾರೋ ಟ್ಯೂಷನ್ ಹೇಳಿ ಹುಟ್ಟಬೇಕಾದ ಪ್ರಜ್ಞೆ ಅದಲ್ಲ. ಉಗ್ರ ರಾಷ್ಟ್ರೀಯವಾದ ಆಗಿರಬಾರದು’ ಎಂದು ಪ್ರತಿಪಾದಿಸಿದರು.

ಕದಡುತ್ತಿರುವ ಹುಸಿ ರಾಷ್ಟ್ರೀಯತೆ:
ಹುಸಿ ರಾಷ್ಟ್ರೀಯತೆಯ ಉನ್ಮಾದ; ಅಕಲ್ಪಿತ ಚರಿತ್ರೆಯ ನಿರೂಪಣೆ ಕುರಿತು ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮುಜಾಫರ್‌ ಅಸಾದಿ ಮಾತನಾಡಿ, ಹುಸಿ ರಾಷ್ಟ್ರೀಯತೆ ನಮ್ಮನ್ನು 7 ವಿವಿಧ ರೂಪಗಳಲ್ಲಿ ಕದಡುತ್ತಿದೆ. ರಾಷ್ಟ್ರೀಯ ನಾಯಕರನ್ನು ಬದಲಾಯಿಸಲಾಗುತ್ತಿದೆ. ಇತಿಹಾಸವನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಸಂಸ್ಥೆಗಳನ್ನು ನಾಶ ಮಾಡ­ಲಾಗುತ್ತಿದೆ. ಸೈನಿಕರ ಕುರಿತು ಉನ್ಮಾದ ಸೃಷ್ಟಿ ಮಾಡಿ ಹೊಸ ರಾಷ್ಟ್ರೀಯ ಸಂಕೇತಗಳನ್ನು ಬದಲಾಯಿ­ಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆಗಳ ಮುಖ್ಯಸ್ಥರಾಗಿರುವ ಎಡಪಂಥೀಯ ಧೋರಣೆ ಇರುವ ವ್ಯಕ್ತಿಗಳನ್ನು ಬದಲಾಯಿಸಿ ಬಲಪಂಥೀಯ ವ್ಯಕ್ತಿಗಳನ್ನು ನೇಮಿಸ­ಲಾಗುತ್ತಿದೆ. ಏಕೆಂದರೆ ಹೊಸ ಸಂಸ್ಕೃತಿ, ಇತಿಹಾಸ ಸೃಷ್ಟಿಸಬೇಕಿದೆ. ರಾಷ್ಟ್ರೀಯತೆ­ಯನ್ನು ಸೃಷ್ಟಿಸಬೇಕಾದರೆ ಸಂಸ್ಕೃತಿ, ಶಿಕ್ಷಣವನ್ನು ಕೈವಶ ಮಾಡಿಕೊಳ್ಳ­ಬೇಕಾಗುತ್ತದೆ ಎಂದರು.

‘ಇಂದು ಅಮೆರಿಕ ನಮ್ಮ ವಿರೋಧಿ­ಯಾಗಿಲ್ಲ. ಅಮೆರಿಕ, ಅಫ್ಘಾನಿಸ್ತಾನದ ಧ್ವಜವನ್ನು ನಮ್ಮ ಉಡುಪುಗಳಲ್ಲಿ ಹಾಕಿಕೊಂಡರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ, ನೆರೆಹೊರೆಯ ದೇಶದ ಬಾವುಟದ ಬಣ್ಣವನ್ನು ಉಡುಪುಗಳಲ್ಲಿ ಹಾಕಬಾರದು. ಬಣ್ಣವೇ ರಾಷ್ಟ್ರೀಯತೆಯ ಸಂಕೇತ ಆಗಿದೆ. ಹುಸಿ ರಾಷ್ಟ್ರೀಯತೆಯ ಸಂಕೇತ ಕೇಸರಿ­ಯಾದರೆ, ಹಸಿರು ದೇಶದ್ರೋಹದ ಬಣ್ಣವಾಗಿದೆ. ಇದು ದುರಂತ. ರಾಷ್ಟ್ರೀಯತೆಯನ್ನು ಚೌಕಟ್ಟಿನೊಳಗೆ ನೋಡಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. ರಂಗನಿರ್ದೇಶಕಿ ಪ್ರತಿಭಾ ಸಾಗರ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.