ADVERTISEMENT

ಶ್ರೀಕಂಠೇಶ್ವರಸ್ವಾಮಿ ದರ್ಶನಕ್ಕೆ ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 8:47 IST
Last Updated 14 ನವೆಂಬರ್ 2017, 8:47 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರದ ಪ್ರಯುಕ್ತ ಸ್ವಾಮಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರದ ಪ್ರಯುಕ್ತ ಸ್ವಾಮಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು   

ನಂಜನಗೂಡು: ಕಾರ್ತಿಕ ಮಾಸದ ಕಡೆ ಸೋಮವಾರದ ಪ್ರಯುಕ್ತ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಬೆಳಿಗಿನ ಜಾವ 4 ಗಂಟೆಯಿಂದಲೇ ಭಕ್ತರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯದ ಪ್ರವೇಶಕ್ಕಾಗಿ ಸರತಿಯ ಸಾಲಿನಲ್ಲಿ ನಿಂತಿದ್ದರು.

ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಏಕವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಬೆಳಗಿನಿಂದಲೇ ಭಕ್ತರು ದೇವಲಯದ ಹೊರ ಆವರಣದಲ್ಲಿ ಹರಕೆ, ಮುಡಿಸೇವೆ, ಉರುಳುಸೇವೆ, ತುಲಾಭಾರ, ಧೂಪ, ದೀಪದ ಆರತಿ ಸೇವೆಯಲ್ಲಿ ತೊಡಗಿದ್ದರು.

ದೇವಾಲಯದಲ್ಲಿ ವಿಶೇಷ ದರ್ಶನದ ₹ 30 ಟಿಕೆಟ್ ನಿಂದ ₹ 1.20 ಲಕ್ಷ ಹಾಗೂ ₹ 100 ಮುಖಬೆಲೆಯ ಟಿಕೆಟ್ ನಿಂದ ₹ 1.95 ಲಕ್ಷ ದೇವಾಲಯಕ್ಕೆ ಆದಾಯ ಲಭಿಸಿದೆ.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ADVERTISEMENT

ದೇವಾಲಯದ ಹೊರಭಾಗದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರದ ಭಕ್ತರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಿದರು. ನಗರದ ನಯನಜ ಕ್ಷತ್ರಿಯ ಸಮಾಜದ ಶ್ರೀಕಂಠೇಶ್ವರ ಮುಡಿಕಟ್ಟೆ ಸಂಘದ ವತಿಯಿಂದ ಶ್ರೀಕಂಠೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ದೇವಾಲಯದ ಹೊರ ಆವರಣದಲ್ಲಿ ಬಾಣ–ಬಿರುಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ನಂಜನಗೂಡು ಉಪ ವಿಭಾಗದ ಎ.ಎಸ್.ಪಿ ಮಹಮ್ಮದ್ ಸುಜೀತಾ ನೇತೃತ್ವದಲ್ಲಿ ಪಿ.ಎಸ್.ಐ ಸವಿ ಪೊಲೀಸ್ ಭದ್ರತೆ ಒದಗಿಸಿದ್ದರು. 108 ಲಿಂಗಗಳಿಗೆ ವಿಶೇಷ ಪೂಜೆ
ಕಾರ್ತಿಕ ಸೋಮವಾರದ ಪ್ರಯುಕ್ತ ತಾಲ್ಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದ ಪ್ರಸನ್ನ ನಂಜುಂಡೇಶ್ವರ ಹಾಗೂ ನಗರದ ಲಿಂಗಭಟ್ಟರ ಗುಡಿ, ಕಾಶಿ ವಿಶ್ವನಾಥ ಮಂದಿರ ಹಾಗೂ ದೇವಿರಮ್ಮನ ಹಳ್ಳಿಯ ಶರಣ ಸಂಗಮ ಮಠದಲ್ಲಿ 108 ಲಿಂಗಗಳಿಗೆ ವಿಶೇಷ ಪೂಜೆ , ಅಲಂಕಾರ, ಸೇವೆ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.