ADVERTISEMENT

ಸಮನ್ವಯತೆ ಸಾರಿದ ಗೀತಗಾಯನ

ಭಾರತ್‌ ಸ್ಕೌಟ್ಸ್ ಅಂಡ್‌ ಗೈಡ್ಸ್‌ನ 17ನೇ ರಾಷ್ಟ್ರೀಯ ಜಾಂಬೂರಿಗೆ ತೆರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:02 IST
Last Updated 5 ಜನವರಿ 2017, 10:02 IST

ಮೈಸೂರು: ನಂಜನಗೂಡಿನ ಅಡಕನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಭಾರತ್‌ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ 17ನೇ ರಾಷ್ಟ್ರೀಯ ಜಾಂಬೂರಿಗೆ ಬುಧವಾರ ತೆರೆಬಿದ್ದಿತು. ಡಿ. 29ರಂದು ಆರಂಭವಾದ ಜಾಂಬೂರಿಯು 7 ದಿನಗಳ ಕಾಲ ಮಕ್ಕಳಲ್ಲಿ ಏಕತೆ, ಸೋದರತೆ, ಶೈಕ್ಷಣಿಕ, ಬೌದ್ಧಿಕ ಮತ್ತು ದೈಹಿಕ ವಿಕಾಸದ ಜತೆಗೆ ಸೇವಾ ಮನೋಭಾವ ಬೆಳೆಸಿ ಮೆಚ್ಚುಗೆಗೆ ಪಾತ್ರವಾಯಿತು.

ಕೊನೆ ದಿನವಾದ ಬುಧವಾರ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಗಮನ ಸೆಳೆಯಿತು. ವಿವಿಧ ಧರ್ಮಗಳ ಗೀತೆ ಹಾಡುವ ಮೂಲಕ ಮಕ್ಕಳಲ್ಲಿ ಸರ್ವಧರ್ಮ ಸಹಿಷ್ಣುತೆ ಪಾಠದ ಬಗ್ಗೆ ತಿಳಿಹೇಳಲಾಯಿತು.

‘ರಘುಪತಿ ರಾಘವ ರಾಜಾ ರಾಮ್’, ‘ಗುರು ಬ್ರಹ್ಮ– ಗುರು ವಿಷ್ಣು’, ‘ಯಾಕುಂದೇಂದು ತುಷಾರ ಹಾರ ಧವಳಾ’, ‘ಹರ್ ದೇಶ್ ಮೇ’ ಸೇರಿದಂತೆ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಹಾಗೂ ಇತರೆ ಧರ್ಮಗಳ ಗೀತೆಗಳನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಡುವ ಮೂಲಕ ಗಮನ ಸೆಳೆದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್‌ನ ಆರ್ಚ್ ಬಿಷಪ್ ಥಾಮಸ್ ಅಂಥೋಣಿ ವಾಳಪಿಳೈ ಮಾತನಾಡಿ, ಸರ್ವಧರ್ಮ ಸಹಿಷ್ಣುತೆಯ ಪಾಠವನ್ನು ಮಕ್ಕಳಿಗೆ ಹೇಳಿದರು.

ಸ್ಕೌಟ್ಸ್ ಅಂಡ್‌ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಜಿಲ್ಲಾ ಮುಖ್ಯ ಆಯುಕ್ತ ಪಿ.ವಿಶ್ವನಾಥ್, ನಿರ್ದೇಶಕ ಕೆ.ಸುಕುಮಾರ್ ಭಾಗವಹಿಸಿ ದ್ದರು. ಇದಾದ ಬಳಿಕ ಧ್ವಜಾವರೋಹಣ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.