ADVERTISEMENT

ಹರ್ಷಿಲ್‌ ಕುಟುಂಬಕ್ಕೆ ₹ 10 ಲಕ್ಷ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:02 IST
Last Updated 4 ಮೇ 2017, 7:02 IST

ಮೈಸೂರು: ತಾಲ್ಲೂಕಿನ ಶಾದನಹಳ್ಳಿಯ ವರುಣಾ ನಾಲೆಯ ಸಮೀಪದ ಜಮೀನಿ ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಲಿಯಾದ ಹರ್ಷಿಲ್‌ ಅವರ ಕುಟುಂಬಕ್ಕೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಶೀಘ್ರ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಬೆಲವತ್ತ ರಾಮಚಂದ್ರ, ‘ಘಟನೆಯಲ್ಲಿ ಗಾಯಗೊಂಡ ಮಂಜು ನಾಥ ಮತ್ತು ಮನೋಜ್‌ ಅವರಿಗೆ ತಲಾ ₹ 5 ಲಕ್ಷ ನೆರವು ನೀಡಬೇಕು. ಮೂರೂ ಕುಟುಂಬಗಳಿಗೆ ಏಕಲವ್ಯ ನಗರದಲ್ಲಿ ನರ್ಮ್‌ ಯೋಜನೆಯಡಿ ವಸತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಲಭಿಸುತ್ತಿಲ್ಲ. ಅಧಿಕಾರಿಗಳು ಬಡ ಕುಟುಂಬಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ತಜ್ಞರ ವರದಿ ವಿರುದ್ಧ ಆಕ್ರೋಶ: ಘಟನೆ ಕುರಿತು ತನಿಖೆಗೆ ಜಿಲ್ಲಾಡಳಿತ ನೇಮಿಸಿದ್ದ10 ತಜ್ಞರನ್ನೊಳಗೊಂಡ ಸಮಿತಿ ನೀಡಿರುವ ಮಧ್ಯಂತರ ವರದಿ ‘ಸಂಪೂರ್ಣ ಸುಳ್ಳು’ ಎಂದು ರಾಮಚಂದ್ರ ಆರೋಪಿಸಿದರು.

‘ಪ್ರಭಾವಿಗಳ ಒತ್ತಡಕ್ಕೆ ಮಣಿದು ವರದಿಯನ್ನು ತಿರುಚಲಾಗಿದೆ. ಸಮಿತಿ ಕಾರ್ಖಾನೆ ಮಾಲೀಕರ ಜತೆ ಶಾಮೀಲಾಗಿ ಸುಳ್ಳು ವರದಿ ನೀಡಿದೆ. ಮಧ್ಯಂತರ ವರದಿಯನ್ನು ಕೂಡಲೇ ವಾಪಸ್‌ ಪಡೆ ಯಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಬಡವರಿಗೆ ನ್ಯಾಯ ದೊರಕಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗಂಗಾಧರ್‌ ಹೈವೆ, ನಗರ ಸಂಘಟನಾ ಸಂಚಾಲಕ ರಾದ ಗಣೇಶ್‌, ಉಮೇಶ್‌ ಮತ್ತು ಗುರು ಮೇದರ ಹಾಜರಿದ್ದರು.

ಚಿಕಿತ್ಸೆಗೆ ನೆರವು ನೀಡಿಲ್ಲ: ಆರೋಪ
‘ಪತಿಯ ಎರಡೂ ಕಾಲುಗಳು ಬೆಂದು ಹೋಗಿದ್ದು, ನಡೆದಾಡಲು ಆಗುತ್ತಿಲ್ಲ, ಚಿಕಿತ್ಸೆಗೆ ಈಗಾಗಲೇ ₹ 8 ಸಾವಿರದಷ್ಟು ಖರ್ಚಾಗಿದೆ. ಸರ್ಕಾರದ ಯಾವುದೇ ಅಧಿಕಾರಿ ನಮ್ಮತ್ತ ತಿರುಗಿಯೂ ನೋಡಿಲ್ಲ. ಚಿಕಿತ್ಸೆಗೆ ನೆರವು ದೊರೆತಿಲ್ಲ’ ಎಂದು ಗಾಯಾಳು ಮಂಜುನಾಥ ಅವರ ಪತ್ನಿ ಲತಾ ಅಳಲು ತೋಡಿಕೊಂಡರು.

‘ನನ್ನ ಮಗನ ಚಿಕಿತ್ಸೆಗೆ ಇದುವರೆಗೆ ₹ 15 ಸಾವಿರ ಖರ್ಚಾಗಿದೆ.  ಆತ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ ಮಗನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಒತ್ತಡ ಹೇರುತ್ತಿದ್ದಾರೆ. ಜಿಲ್ಲಾಧಿಕಾರಿ ಅಥವಾ ಯಾವುದೇ ರಾಜಕಾರಣಿಗಳು ನಮ್ಮನ್ನು ಭೇಟಿಯಾಗಿಲ್ಲ’ ಮನೋಜ್‌ ಅವರ ತಾಯಿ ನಾಗಮಣಿ ಹೇಳಿದರು.

‘ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ತಜ್ಞರ ಸಮಿತಿ ವರದಿ ಹೇಳಿದೆ. ಉದ್ದೇಶಪೂರ್ವಕ ವಾಗಿ ಏಕೆ ಬೆಂಕಿ ಹಚ್ಚಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.