ADVERTISEMENT

ಹುಲಿಗಳಿಂದ ಹುಲಿಯ ದತ್ತು!

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 8:43 IST
Last Updated 8 ಸೆಪ್ಟೆಂಬರ್ 2017, 8:43 IST
ಹುಲಿಗಳಿಂದ ಹುಲಿಯ ದತ್ತು!
ಹುಲಿಗಳಿಂದ ಹುಲಿಯ ದತ್ತು!   

ಮೈಸೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಹುಬ್ಬಳ್ಳಿ ಟೈಗರ್ಸ್‌ ತಂಡ ಈ ಬಾರಿಯೂ ಚಾಮರಾಜೇಂದ್ರ ಮೃಗಾಲಯದ ಹುಲಿಯನ್ನು ದತ್ತು ತೆಗೆದುಕೊಂಡಿದೆ.

ತಂಡದ ಮಾಲೀಕ ಅಭಿಷೇಕ್‌ ಜಿಂದಾಲ್‌, ಕೋಚ್‌ ಮನ್ಸೂರ್‌ ಅಲಿಖಾನ್‌, ಸಹಾಯಕ ಸಿಬ್ಬಂದಿ, ನಾಯಕ ಆರ್‌.ವಿನಯ್‌ ಕುಮಾರ್‌, ಮಯಂಕ್‌ ಅಗರವಾಲ್‌, ಪ್ರವೀಣ್‌ ದುಬೆ ಮತ್ತು ಇತರ ಆಟಗಾರರು ಗುರುವಾರ ಮೃಗಾಲಯಕ್ಕೆ ಭೇಟಿ ನೀಡಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮೃಗಾಲಯ ನಿರ್ದೇಶಕ ರವಿಶಂಕರ್‌ ಅವರು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಟೈಗರ್ಸ್‌ ತಂಡಕ್ಕೆ ನೀಡಿದರು. ಒಂದು ಹುಲಿಯನ್ನು ದತ್ತು ತೆಗೆದುಕೊಂಡ ತಂಡ ವರ್ಷಕ್ಕೆ ₹ 1 ಲಕ್ಷ ಮೊತ್ತವನ್ನು ಮೃಗಾಲಯಕ್ಕೆ ನೀಡಲಿದೆ.

ADVERTISEMENT

‘ಹುಬ್ಬಳ್ಳಿ ಟೈಗರ್ಸ್‌ ತಂಡದವರು ಈ ಬಾರಿಯೂ ಮೃಗಾಲಯಕ್ಕೆ ಭೇಟಿ ನೀಡಿದ್ದು, ಸತತ ಮೂರನೇ ವರ್ಷ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿ ಟೈಗರ್ಸ್‌ ಎಂಬ ಹೆಸರು ಇಟ್ಟುಕೊಂಡಿರುವ ತಂಡ ಹುಲಿ ಸಂರಕ್ಷಣೆ ಕೆಲಸದಲ್ಲಿ ಕೈಜೋಡಿಸಿರುವುದು ಸಂತಸದ ವಿಷಯ’ ಎಂದು ಮಲ್ಲಿಗೆ ವೀರೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಆಡಲು ಬಂದಾಗ ಮೃಗಾಲಯಕ್ಕೆ ಭೇಟಿ ನೀಡುವ ಪರಿಪಾಠವನ್ನು ತಂಡದ ಆಟಗಾರರು ಬೆಳೆಸಿಕೊಂಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕೇವಲ ಹುಲಿ ಮಾತ್ರವಲ್ಲದೆ, ಇತರ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಆಟಗಾರರು ಹೇಳಿದ್ದಾರೆ ಎಂದರು.

‘ಟೈಗರ್ಸ್‌ ಎಂಬ ಹೆಸರು ಇಟ್ಟುಕೊಂಡಿರುವ ಜತೆಗೆ ನಾವು ಹುಲಿಗಳ ಸಂರಕ್ಷಣೆಯಲ್ಲಿ ಕೈಜೋಡಿಸಿದ್ದೇವೆ. ಪ್ರಾಣಿಗಳನ್ನು ದತ್ತು ಸ್ವೀಕರಿಸುವುದರಿಂದ ಅವುಗಳ ಸಾಕಣೆಗೆ ಅಗತ್ಯವಿರುವ ಖರ್ಚು ನೋಡಿಕೊಳ್ಳಬಹುದು. ಆ ಮೂಲಕ ವನ್ಯಜೀವಿಗಳಿಗೆ ನಮ್ಮ ಕಡೆಯಿಂದ ಸಹಾಯ ಮಾಡಬಹುದು’ ಎಂದು ನಾಯಕ ವಿನಯ್‌ಕುಮಾರ್‌ ಹೇಳಿದರು.

ಗುರುವಾರ ಬೆಳಿಗ್ಗೆ ಮೃಗಾಲಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಆಟಗಾರರನ್ನು ನೋಡುವ ಅವಕಾಶ ಲಭಿಸಿತು. ಆಟಗಾರರ ಜತೆ ಸೆಲ್ಫಿ ತೆಗೆಸಿಕೊಂಡು ಸಂತಸಪಟ್ಟರು. ಟೈಗರ್ಸ್‌ ತಂಡ ಬುಧವಾರ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ವಿರುದ್ಧ ಗೆಲುವು ಪಡೆದಿತ್ತು.

ವಾರಿಯರ್ಸ್‌ ತಂಡದಿಂದ ಕ್ರಿಕೆಟ್‌ ಟೂರ್ನಿ
ಎನ್‌ಆರ್‌ ಸಮೂಹದ ಒಡೆತನದಲ್ಲಿರುವ ಮೈಸೂರು ವಾರಿಯರ್ಸ್‌ ತಂಡ ತನ್ನ ‘ಪ್ರೇರೇಪಣಾ’ ಯೋಜನೆಯಡಿ ಕೊಳೆಗೇರಿ ನಿವಾಸಿಗಳಿಗೆ ಗುರುವಾರ ಸೌಹಾರ್ದ ಕ್ರಿಕೆಟ್‌ ಟೂರ್ನಿ ಆಯೋಜಿಸಿತ್ತು.

ಮಹಾಜನ ಕಾಲೇಜು ಮೈದಾನದಲ್ಲಿ ನಡೆದ ಟೆನಿಸ್‌ ಬಾಲ್‌ ಟೂರ್ನಿಯಲ್ಲಿ ಏಳು ಕೊಳೆಗೇರಿಗಳ ಎಂಟು ತಂಡಗಳು ಪಾಲ್ಗೊಂಡಿದ್ದವು. ಮೈಸೂರು ವಾರಿಯರ್ಸ್‌ ತಂಡದ ಮಾಲೀಕ ಅರ್ಜುನ್‌ ರಂಗ, ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಡಾ.ಸೀತಾರಾಂ ಮತ್ತು ವಾರಿಯರ್ಸ್‌ ತಂಡದ ಆಟಗಾರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

‘ಕೆಪಿಎಲ್‌ನಿಂದಾಗಿ ಮೈಸೂರಿನೆಲ್ಲೆಡೆ ಕ್ರಿಕೆಟ್‌ ಜ್ವರ ಹಬ್ಬಿದೆ. ಕೊಳೆಗೇರಿಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ನಾವು ನಡೆಸಿರುವ ಸಣ್ಣ ಪ್ರಯತ್ನ ಇದು’ ಎಂದು ಅರ್ಜುನ್‌ ರಂಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.