ADVERTISEMENT

ಹಳ್ಳಿಕಾರ್‌ ಜೋಡೆತ್ತು ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 5:43 IST
Last Updated 7 ಜನವರಿ 2018, 5:43 IST

ಸಾಲಿಗ್ರಾಮ: ಸಮೀಪದ ಚುಂಚನ ಕಟ್ಟೆಯಲ್ಲಿ ಕೋದಂಡ ರಾಮ ಬ್ರಹ್ಮ ರಥೋತ್ಸವ ಅಂಗವಾಗಿ ನಡೆಯುತ್ತಿರುವ ಜಾನುವಾರು ಪರಿಷೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳು ಗಮನಸೆಳೆಯುತ್ತಿವೆ. ಸುಗ್ಗಿ ಕೆಲಸ ಮುಗಿಸಿರುವ ರೈತರು ಮುಂದಿನ ದಿನಗಳಲ್ಲಿ ಬೇಸಾಯಕ್ಕೆ ಅಗತ್ಯವಿರುವ ಎತ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.

ಚುಂಚನಕಟ್ಟೆ ಹೊರವಲಯದ ಜಮೀನುಗಳಲ್ಲಿ ಜಾತ್ರೆ ಸೇರಿದೆ. ಈ ಬಾರಿ ವಿವಿಧ ಪ್ರದೇಶಗಳಿಂದ ನೂರಾರು ಹಳ್ಳಿಕಾರ್ ಜೋಡೆತ್ತುಗಳು ಬಂದಿವೆ. ಅವುಗಳ ಮಾಲೀಕರು ಅಲಂಕೃತಗೊಂಡ ಚಪ್ಪರದಡಿಯಲ್ಲಿ ಕಟ್ಟಿಹಾಕಿದ್ದಾರೆ.

ಚುಂಚನಕಟ್ಟೆ ಹೋಬಳಿಯ ಹಳಿಯೂರು ಗ್ರಾಮದ ರಾಹುಲ್‌ ಹಾಗೂ ಪುನೀತ್ ಎಂಬುವವರಿಗೆ ಸೇರಿದ ₹ 5 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜೋಡೆತ್ತುಗಳು ಆಕರ್ಷಿಸುತ್ತಿವೆ. ಇವುಗಳ ಜತೆ ಸೆಲ್ಫಿ ತೆಗೆದುಕೊಳ್ಳಲು ಯುವಜನರು ಮುಗಿಬೀಳುತ್ತಿರುವುದು ವಿಶೇಷವಾಗಿದೆ. ಎತ್ತುಗಳ ಹಲ್ಲು ಪರೀಕ್ಷಿಸಿ ನಂತರ ಬೆಲೆ ನಿಗದಿ ಮಾಡು ವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ADVERTISEMENT

‘ಎರಡು ಹಲ್ಲು ಆಗಿದ್ದರೆ ಗದ್ದೆಯಲ್ಲಿ ಹುಳುಮೆ ಮಾಡಲು ಸಾಧ್ಯ. ಆದ್ದರಿಂದ ಹಲ್ಲುಗಳು ಎಷ್ಟು ಎಂಬುದು ನೋಡಿಯೇ ಖರೀದಿ ಮಾಡುತ್ತೇವೆ’ ಎಂದು ಹಳ್ಳಿಕಾರ್‌ ಜೋಡೆತ್ತು ಖರೀದಿ ಮಾಡಲು ಬಳ್ಳಾರಿ ಜಿಲ್ಲೆಯಿಂದ ಬಂದಿರುವ ರೈತ ಬಸವನಗೌಡ ಪಾಟೀಲ ಹೇಳುತ್ತಾರೆ.

ಬೇಸಾಯಕ್ಕೆ ಹಳ್ಳಿಕಾರ್ ಜೋಡೆತ್ತುಗಳೇ ಸೂಕ್ತ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಹಾವೇರಿ ಜಿಲ್ಲೆಯ ಬಂಡಿಗೌಡ ತಿಳಿಸಿದರು. ಮಂಡ್ಯ, ಕೊಡಗು, ಚಾಮರಾಜ ನಗರ, ಚಿಕ್ಕಮಗಳೂರು, ಹಾವೇರಿ, ಬಳ್ಳಾರಿ, ಗದಗ ಜಿಲ್ಲೆಯಿಂದ ನೂರಾರು ರೈತರು ಜೋಡೆತ್ತು ಖರೀದಿಗೆ ಬಂದಿದ್ದಾರೆ. ಜಾನುವಾರು, ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಮಹೇಶಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.