ADVERTISEMENT

ಎಸ್‌ಟಿಪಿ ಸ್ಥಳಾಂತರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:10 IST
Last Updated 23 ಮಾರ್ಚ್ 2017, 7:10 IST

ರಾಯಚೂರು: ನಗರ ಹೊರವಲಯ ಹೊಸೂರ ಗ್ರಾಮಕ್ಕೆ ಹೊಂದಿಕೊಂಡು ನಿರ್ಮಿಸುತ್ತಿರುವ ಒಳಚರಂಡಿ ಶುದ್ಧೀಕರಣ ಘಟಕ (ಎಸ್‌ಟಿಪಿ)ವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಹೊಸೂರು ನಾಗರಿಕ ಕ್ರಿಯಾ ವೇದಿಕೆಯಿಂದ ಜಿಲ್ಲಾಧಿಕಾರಿ ಮತ್ತು ಸಂಸದರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಎಸ್‌ಟಿಪಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವುದರಿಂದ ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದರು.

ಗ್ರಾಮದಿಂದ ಕನಿಷ್ಠ ಒಂದು ಕಿಲೋ ಮೀಟರ್‌ ದೂರದಲ್ಲಿ ಅದನ್ನು ನಿರ್ಮಸಬೇಕು ಎನ್ನುವ ನಿಯಮವಿದ್ದರೂ ಅದನ್ನು ಪಾಲಿಸಿಲ್ಲ. ಕೂಡಲೇ ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಜನರು ಕೋರಿದರು.

ಗ್ರಾಮದಿಂದ 150 ಮೀಟರ್‌ ಅಂತರದಲ್ಲಿ ಎಸ್‌ಟಿಪಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ 2012ರಲ್ಲಿಯೂ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಎಲ್ಲ ಅಧಿಕಾರಿಗಳು ಸ್ಪಂದಿಸಿ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ವಿವಿಧ ರಾಜ್ಯಗಳ ತಜ್ಞರು ಬಂದು ಪರಿಶೀಲಿಸಿ ಸ್ಥಳ ಬದಲಾವಣೆಗೆ ಸೂಚಿಸಿದ್ದಾರೆ. ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜನರ ಒತ್ತಾಯಕ್ಕೆ ಮಣಿದು 2014 ರಲ್ಲಿ ಎಸ್‌ಟಿಪಿಯನ್ನು ಅರಳಿಬೆಂಚಿ ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಈಗ ಅಧಿಕಾರಿಗಳು ಉದ್ಧಟತನದಿಂದ ಉತ್ತರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ರಾಘವೇಂದ್ರ ನಾಯಕ, ಮಲ್ಲಪ್ಪಗೌಡ, ಸಂಗಮೇಶ ಸಾವುಕರ, ಚಂದ್ರಶೇಖರ್‌, ಸುರೇಶಬಾಬು. ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.