ADVERTISEMENT

ಕೆಪಿಎಂಇ ಮಸೂದೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:01 IST
Last Updated 17 ನವೆಂಬರ್ 2017, 6:01 IST

ಸಿಂಧನೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕೆಪಿಎಂಇ ಮಸೂದೆ ಲಾಬಿಗೆ ಒಳಗಾಗದೆ ಸದನದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಖಾಸಗಿ ಆಸ್ಪತ್ರೆಗಳ ವೈದ್ಯರು ವೃತ್ತಿ ಧರ್ಮವನ್ನು ಮೆರೆತು ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ವೈದ್ಯಕೀಯ ಸಹಾಯದ ನೆಪದಲ್ಲಿ ದುಬಾರಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಮನೆ-ಮಠ ಮಾರಿಕೊಂಡು ಬೀದಿಗೆ ಬಂದಿವೆ. ಮೃತಪಟ್ಟವರ ಶವ ಪಡೆಯಲು ಹಣ ಕಟ್ಟಬೇಕಾದ ಸ್ಥಿತಿಯಿದೆ. ವಿಧೇಯಕ ಜಾರಿಗೊಳಿಸುವುದು ಸೂಕ್ತ ಕ್ರಮವಾಗಿದೆ. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ ಹಾಕಬೇಡಿ ಎಂದು ವೈದ್ಯರು ಧರಣಿ ನಡೆಸುತ್ತಿರುವುದು ಸರಿಯಲ್ಲಿ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಪ್ಪ ಕಿಲ್ಲೇದ್ ಅಭಿಪ್ರಾಯಪಟ್ಟರು.

ಜ್ಯೋತಿಷ್ಯ, ವಾಸ್ತು, ಮೌಢ್ಯಾಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರಸಾರ, ಪ್ರಚಾರ ಮಾಡುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಪಾಧ್ಯಕ್ಷ ಹನುಮಂತಪ್ಪ ಮನವಿ ಮಾಡಿದರು.

ADVERTISEMENT

ತಹಶೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ವೀರೇಶ, ಸದಸ್ಯರಾದ ಲಿಂಗಪ್ಪ ಮುಕ್ಕುಂದಾ, ಗೌರಮ್ಮ ಸೋಮಲಾಪುರ, ಲಕ್ಷ್ಮೀ, ಮಾರೆಮ್ಮ, ನಾಗಮ್ಮ, ರಮ್ಜಾಬೇಗಂ, ಶಿವಮ್ಮ, ಮುತ್ತಮ್ಮ, ಈರಮ್ಮ, ಶಾರದಮ್ಮ ಇದ್ದರು.

ಯುವ ಜಾಗೃತಿ ವೇದಿಕೆ ಬೆಂಬಲ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ಯುವ ಜಾಗೃತಿ ವೇದಿಕೆ ತಾಲ್ಲೂಕು ಘಟಕದಿಂದ ಗುರುವಾರ ತಹಶೀಲ್ದಾರ್ ವೆಂಕನಗೌಡ ಆರ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಖಾಸಗಿ, ಕಾರ್ಪೋರೇಟ್ ಆಸ್ಪತ್ರೆಗಳ ಲಾಬಿಗೆ ಮಣಿಯದೆ ಯಥಾವತ್ತಾಗಿ ಕಾಯಿದೆ ಜಾರಿಗೊಳಿಸಬೇಕೆಂದು ವೇದಿಕೆ ನಗರ ಘಟಕದ ಅಧ್ಯಕ್ಷ ಶಿವಲಿಂಗ ಕೊಡ್ಲಿ ಒತ್ತಾಯಿಸಿದರು. ಪದಾಧಿಕಾರಿಗಳಾದ ಮುತ್ತುರಾಜ, ಮಹಾಂತೇಶ, ನವೀನ್, ಹನುಮಂತಿ, ಹನುಮೇಶ, ಹರೀಶ್, ದಾವಲಮಲಿಕ್, ಶಿವು, ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.