ADVERTISEMENT

‘ಕ್ಷೇತ್ರದ ಅಭಿವೃದ್ಧಿಗಾಗಿ ಬದಲಾವಣೆ ಮಾಡಿ’

ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:28 IST
Last Updated 25 ಏಪ್ರಿಲ್ 2018, 12:28 IST

ಮಾನ್ವಿ: ‘ಕ್ಷೇತ್ರವನ್ನು 20ವರ್ಷಗಳ ದುರಾಡಳಿತದಿಂದ ಮುಕ್ತವಾಗಿಸಲು ಮತ್ತು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಮತದಾರರು ನಾಯಕತ್ವ ಬದಲಾವಣೆ ಮಾಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ ಎಂ.ಈರಣ್ಣ ಗುತ್ತೇದಾರ ಹೇಳಿದರು.

ಮಂಗಳವಾರ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಡಾ.ತನುಶ್ರೀ ಅವರ ನಾಮಪತ್ರ ಸಲ್ಲಿಕೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ನಾಲ್ಕು ಅವಧಿಗೆ ಆಯ್ಕೆಯಾಗಿರುವ ಕಾಂಗ್ರೆಸ್‌ ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಶಾಸಕರ ಭ್ರಷ್ಟ ಆಡಳಿತದಿಂದ ಜನತೆ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಹರಿಯದೆ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕ ಜನಪರವಾಗಿ ಕೆಲಸ ಮಾಡುವವರಿಗೆ ರಾಜಕೀಯ ದುರುದ್ದೇಶದಿಂದ ತೊಂದರೆ ನೀಡುವ ಶಾಸಕರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದರು.

ADVERTISEMENT

ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಸವಂತಪ್ಪ ಮಾತನಾಡಿದರು. ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್‌ ನಜೀರುದ್ದೀನ್‌ ಖಾದ್ರಿ, ಮುಖಂಡರಾದ ಅನಿಲ್‌ಕುಮಾರ, ಚಂದ್ರಕಲಾಧರ ಸ್ವಾಮಿ ಮತ್ತು ಮಹ್ಮದ್‌ ಮುಜೀಬ್‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ ಎಂ.ಈರಣ್ಣ, ಮುಖಂಡರಾದ ಎಚ್‌.ಹುಸೇನ್‌ ಪಾಷಾ, ಜಾಕೀರ ಮೋಹಿನುದ್ದೀನ್‌, ಸಂತೋಷ ಜೈನ್‌, ಎಂ.ಪ್ರವೀಣಕುಮಾರ, ಅಬ್ದುಲ್‌ ವಾಜೀದ್‌, ಬಸವರಾಜ ಪಾಟೀಲ್ ಡೊಣಮರಡಿ, ಹುಸೇನ್ ಬೇಗ್‌,ಎಂ.ಡಿ.ಮಹಿಮೂದ್‌, ಸೈಯದ್‌ ಏಜಾಜ್‌ ಖಾದ್ರಿ, ಎಸ್‌.ಮಹ್ಮದ್‌,ಕೆ.ಸತ್ಯನಾರಾಯಣ ವಲ್ಕಂದಿನ್ನಿ, ಎಂ.ಈರಣ್ಣ ಅಭಿಮಾನಿಗಳ ಸಂಘದ ಸದಸ್ಯರು ಇದ್ದರು. ಎಂ.ಈರಣ್ಣ ಅವರ ನಿವಾಸದಿಂದ ತಹಶೀಲ್ದಾರ್‌ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸಿದ್ದರು.

‘ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ನಿರ್ಲಕ್ಷ್ಯ’

ಮಾನ್ವಿ: ‘ಮತದಾರರು ಕ್ಷೇತ್ರದ ಅಭಿವೃದ್ಧಿಗೆ ನಿಲ್ಷಕ್ಯವಹಿಸಿರುವ ಕಾಂಗ್ರೆಸ್‌ ಶಾಸಕರನ್ನು ಚುನಾವಣೆಯಲ್ಲಿ ಪರಾಭವಗೊಳಿಸುವ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಹೇಳಿದರು.

ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ವೈ.ಶರಣಪ್ಪ ನಾಯಕ ಗುಡದಿನ್ನಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ತುಂಗಭದ್ರಾ ಎಡದಂಡೆ ನಾಲೆಯಿಂದ ಸಮರ್ಪಕವಾಗಿ ನೀರು ಹರಿಸದ ಕಾರಣ ಈ ಭಾಗದ ರೈತರು ಪ್ರತಿ ವರ್ಷ ನಿರಂತರವಾಗಿ ಬೆಳೆ ಹಾನಿ ಅನುಭವಿಸಿದ್ದಾರೆ. ಶಾಸಕ ಜಿ.ಹಂಪಯ್ಯ ನಾಯಕ ತುಂಗಭದ್ರಾ ಕಾಡಾ ಅಧ್ಯಕ್ಷ ಪದವಿ ಹೊಂದಿದ್ದರೂ ಕೂಡ ಇಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ’ ಎಂದರು.

ಅಭ್ಯರ್ಥಿ ವೈ.ಶರಣಪ್ಪ ನಾಯಕ ಮಾತನಾಡಿ,‘ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ನಿವಾರಣೆಗಾಗಿ ನನ್ನನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು’ ಎಂದರು.ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್‌ ಅನ್ವರಿ, ಮಾಜಿ ಶಾಸಕ ಗಂಗಾಧರ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಶರಣಪ್ಪಗೌಡ ಸಿರವಾರ, ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮುಖಂಡರಾದ ಪ್ರಕಾಶ ಜೇಗರಕಲ್‌, ಬಸವರಾಜಪ್ಪ ಯರಮಲದೊಡ್ಡಿ, ಉಮೇಶ ಸಜ್ಜನ್‌, ಮಲ್ಲನಗೌಡ ನಕ್ಕುಂದಿ, ಕೊಟ್ರೇಶಪ್ಪ ಕೋರಿ, ಜಿ.ಆರ್‌.ಪಾಟೀಲ್‌, ಮ್ಯಾಕಲ್‌ ಅಯ್ಯಪ್ಪ ನಾಯಕ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶಿವಶರಣಗೌಡ ಲಕ್ಕಂದಿನ್ನಿ ಇದ್ದರು.

ನಾನೇ ಬಿಜೆಪಿ ಅಭ್ಯರ್ಥಿ– ಮಾನಪ್ಪ

ಮಾನ್ವಿ:‘ಬಿಜೆಪಿಯ ಪಟ್ಟಿಯಲ್ಲಿ ಘೋಷಣೆಯಾದ ಪ್ರಕಾರ ಬಿ.ಫಾರಂ ಸಮೇತ ಸೋಮವಾರ ನಾಮಪತ್ರ ಸಲ್ಲಿಸಿರುವ ನಾನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ’ ಎಂದು ಬಿ.ಮಾನಪ್ಪ ನಾಯಕ ಹೇಳಿದರು.

ಮಂಗಳವಾರ ಎರಡನೇ ಬಾರಿಗೆ ಚುನಾವಣಾಧಿಕಾರಿಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ವೈ.ಶರಣಪ್ಪ ನಾಯಕ ಅವರಿಗೆ ಪಕ್ಷದ ವರಿಷ್ಠರು ಸಿ.ಫಾರಂ ವಿತರಿಸಿಲ್ಲ. ಅವರಿಗೂ ಕೂಡ ಎರಡನೇ ಬಿ.ಫಾರಂ ನೀಡಿದ್ದಾರೆ. ಭಿ.ಫಾರಂ ಜೊತೆಗೆ ಮೊದಲು ನಾಮಪತ್ರ ಸಲ್ಲಿಸಿರುವ ನಾನು ಕಾನೂನಿನ ಪ್ರಕಾರ ಬಿಜೆಪಿಯ ಅಧಿಕೃತ ಅಭ್ಯರ್ಥಿ.

ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಈ ಕುರಿತು ಚುನಾವಣಾಧಿಕಾರಿಗಳನ್ನು ಪ್ರಶ್ನಿಸಲಾಗುವುದು. ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೋರ್‌ ಕಮಿಟಿಯಿಂದ ಘೋಷಿಸಲ್ಪಟ್ಟಿರುವ ನಾನು ಪಕ್ಷದ ಅಧಿಕೃತ ಅಭ್ಯರ್ಥಿ ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.