ADVERTISEMENT

ಗಂಜಳ್ಳಿ ಹಳ್ಳ: ನೂರಾರು ಮೀನು ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:03 IST
Last Updated 4 ಡಿಸೆಂಬರ್ 2017, 5:03 IST

ಶಕ್ತಿನಗರ: ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಗಂಜಳ್ಳಿ ಗ್ರಾಮದ ಹಳ್ಳಕ್ಕೆ ರಾಸಾಯನಿಕ ನೀರು ಸೇರುತ್ತಿದ್ದು, ಇದರಿಂದ ಹಳ್ಳದಲ್ಲಿನ ನೂರಾರು ಮೀನುಗಳು ಮೃತಪಟ್ಟಿವೆ.

ವಡ್ಲೂರು, ಚಿಕ್ಕಸೂಗೂರು ಸುತ್ತಮುತ್ತ ಪ್ರದೇಶಗಳಲ್ಲಿನ ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ನೀರು ಗಂಜಳ್ಳಿ ಹಳ್ಳಕ್ಕೆ ಸೇರುತ್ತಿದೆ. ಈ ಹಳ್ಳದಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದ್ದು, ಅವುಗಳ ಸಾವಿನಿಂದ ಮೀನುಗಾರರಿಗೆ ನಷ್ಟ ಉಂಟಾಗಿದೆ. ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ನೀರು ಹಳ್ಳ ಸೇರದಂತೆ ಪ್ರತ್ಯೇಕ ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ, ಅದು ಅವೈಜ್ಞಾನಿಕವಾಗಿರುವುದರಿಂದ ರಾಸಾಯನಿಕ ಮಿಶ್ರಿತ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತಿದೆ’ ಎಂದು ಸ್ಥಳೀಯರು ದೂರಿದರು.

ಹಳ್ಳದಲ್ಲಿ ಮೀನು ಹಾಗೂ ಇನ್ನಿತರ ಜಲಚರಗಳು ಸಾವನ್ನಪ್ಪಿರುವುದರಿಂದ ಮೃತಪಟ್ಟಿರುವುದರಿಂದ ದುರ್ವಾಸನೆ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ವಸಂತಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ರಾಸಾಯನಿಕ ಮಿಶ್ರಿತ ನೀರು ಬಿಡುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರ ಅಧಿಕಾರಿಗಳಿಗೆ ದೂರು ನೀಡಲಾಗುವುದು. ನಾಲೆಗಳ ಮೂಲಕ ನೇರವಾಗಿ ಹಳ್ಳಕ್ಕೆ ಸೇರುತ್ತಿರುವ ನೀರನ್ನು ಪರೀಕ್ಷಿಸಿ ವರದಿ ನೀಡುವಂತೆ ಪರಿಸರ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.