ADVERTISEMENT

ಗೊಲ್ಲದಿನ್ನಿಯಲ್ಲಿ ಮೂಲ ಸೌಕರ್ಯಗಳೇ ಇಲ್ಲ

ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಕಾಣದ ಪ್ರಾಥಮಿಕ ಆರೋಗ್ಯ ಕೇಂದ್ರ

ಮಂಜುನಾಥ ಎನ್ ಬಳ್ಳಾರಿ
Published 10 ಜನವರಿ 2017, 9:49 IST
Last Updated 10 ಜನವರಿ 2017, 9:49 IST
ಕವಿತಾಳ ಸಮೀಪದ ಗೊಲ್ಲದಿನ್ನಿ ಗ್ರಾಮದ ಜನತಾ ಕಾಲೊನಿಯಲ್ಲಿ ರಸ್ತೆ ಮೇಲೆ ನೀರು ಹರಿದು ಕುಡಿಯುವ ನೀರಿನ ನಲ್ಲಿ ಸುತ್ತ ಗಲೀಜು ಸೃಷ್ಟಿಯಾಗಿ ರಸ್ತೆಯಲ್ಲಿ ನೀರು ನಿಂತಿರುವುದು.
ಕವಿತಾಳ ಸಮೀಪದ ಗೊಲ್ಲದಿನ್ನಿ ಗ್ರಾಮದ ಜನತಾ ಕಾಲೊನಿಯಲ್ಲಿ ರಸ್ತೆ ಮೇಲೆ ನೀರು ಹರಿದು ಕುಡಿಯುವ ನೀರಿನ ನಲ್ಲಿ ಸುತ್ತ ಗಲೀಜು ಸೃಷ್ಟಿಯಾಗಿ ರಸ್ತೆಯಲ್ಲಿ ನೀರು ನಿಂತಿರುವುದು.   
ಕವಿತಾಳ: ಇಲ್ಲಿನ ಗೊಲ್ಲದಿನ್ನಿ ಗ್ರಾಮದಲ್ಲಿ ಸೂಕ್ತ  ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಮಲೀನ ನೀರು ಹರಿದು ವಾತಾವರಣ  ಸಂಪೂರ್ಣ ಅನೈರ್ಮಲ್ಯಗೊಂಡಿದೆ.  ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.
 
ಹಿರೇಹಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲದಿನ್ನಿಯ ಜನತಾ ಕಾಲೊನಿಯಲ್ಲಿ  ಸುಮಾರು ಎರಡು ಸಾವಿರ ಜನಸಂಖ್ಯೆ ಇದ್ದು,  ಮೂವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. 
 
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ಪ್ರಮಾಣದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕುಡಿಯುವ ನೀರಿನ ನಲ್ಲಿ ಸುತ್ತಮುತ್ತ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಆ ಪ್ರದೇಶದ ಸುತ್ತ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಕೊಳಚೆ ನಡುವೆ ಇರುವ ನಲ್ಲಿಯ ನೀರನ್ನೇ ಗ್ರಾಮಸ್ಥರು ಅನಿವಾರ್ಯವಾಗಿ ಬಳಕೆ ಮಾಡಬೇಕಾದ ಪರಿಸ್ಥಿತಿ ಇದೆ. 
 
ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣ, ಕೆಲ ಓಣಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರೂ ಚರಂಡಿ ವ್ಯವಸ್ಥೆ ಇಲ್ಲ. ಈಚೆಗೆ ನಿರ್ಮಾಣಗೊಂಡಿರುವ ಶುದ್ಧೀಕರಣ ಘಟಕದಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಲಭಿಸಿದೆ. ಇಲ್ಲಿನ ಆರೋಗ್ಯ ಉಪ ಕೇಂದ್ರದ ಕಟ್ಟಡ ಕಾಮಗಾರಿ ಕಳೆದ ಒಂದು ವರ್ಷದ ಹಿಂದೆ ಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆಯಾಗಿಲ್ಲ ಹೀಗಾಗಿ ಜನರಿಗೆ ತೊಂದರೆಯಾಗಿದೆ. ಈ ಕೇಂದ್ರದಲ್ಲಿ  ನರ್ಸ್‌ ಒಬ್ಬರನ್ನು ನೇಮಕ ಮಾಡಲಾಗಿದೆ.
 
ಅವರು ಪ್ರತಿನಿತ್ಯ ಬಂದು ಹೋಗಿ ಮಾಡುತ್ತಿದ್ದು ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಪರದಾಟ ತಪ್ಪಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಸ್ವಂತ ಕಟ್ಟಡ ಇಲ್ಲದ ಕಾರಣ ಬೀಳುವ ಸ್ಥಿತಿಯಲ್ಲಿರುವ ಹಳೇ ಶಾಲಾ ಕಟ್ಟಡದಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ ನಡೆಯುತ್ತಿದೆ.  ಅಲ್ಲದೇ ದಿನಕ್ಕೆ ಒಮ್ಮೆ ಮಾತ್ರ ಬಸ್‌ ಗ್ರಾಮಕ್ಕೆ ಬರುತ್ತಿದ್ದು ಕವಿತಾಳ, ಮಾನ್ವಿ ಪಟ್ಟಣಗಳಿಗೆ ಶಾಲಾ ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆ ಮತ್ತು ಸಂತೆ, ಮಾರುಕಟ್ಟೆಗೆ ಹೋಗುವ ಗ್ರಾಮಸ್ಥರಿಗೆ 1.5 ಕಿ.ಮೀ.ದೂರದ ಲಿಂಗಸುಗೂರು ರಾಯಚೂರು ಮುಖ್ಯರಸ್ತೆ (ಗೊಲ್ಲದಿನ್ನಿ ಕ್ರಾಸ್‌)ವರೆಗೆ ಕಾಲ್ನಡಿಗೆ ಅನಿವಾರ್ಯವಾಗಿದೆ.
 
ಮಾಹಿತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಜಿಲ್ಲಾ ಪಂಚಾಯಿತಿ ವತಿಯಿಂದ ನೀಡುವ ಸಹಾಯಧನ ಕುರಿತು ಸೂಕ್ತ ಮಾಹಿತಿ ಇಲ್ಲ ಎಂದು ಗ್ರಾಮದ ಗುರುರಾಜ ಮತ್ತು ರಮೇಶ ನಾಯಕ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.