ADVERTISEMENT

ಚುನಾವಣೆ ಕರ್ತವ್ಯ ನಿರ್ಲಕ್ಷಿಸಿದರೆ ಕ್ರಮ

ಜಿಲ್ಲಾಧಿಕಾರಿ ಡಾ.ಗೌತಮ್‌ ಬಗಾದಿಯಿಂದ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:09 IST
Last Updated 21 ಮಾರ್ಚ್ 2018, 12:09 IST

ರಾಯಚೂರು: ಚುನಾವಣಾ ಕಾರ್ಯಗಳಿಗೆ ನಿಯೋಜಿತ ಅಧಿಕಾರಿಗಳು ಚುನಾವಣಾ ಸಭೆಗೆ ಗೈರು ಹಾಜರಿ ಆಗುವುದು ಅಥವಾ ತಡವಾಗಿ ಬರುವುದು ಸಲ್ಲದು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಗೌತಮ್‌ ಬಗಾದಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಲಯ ಮಟ್ಟದ ಚುನಾವಣಾ ಅಧಿಕಾರಿಗಳ ತರಬೇತಿಯಲ್ಲಿ ಮಾತನಾಡಿದರು.

ಜವಾಬ್ದಾರಿ ಅರಿಯದೆ ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿಸುವುದು ಕಂಡು ಬಂದರೆ ಕೂಡಲೇ ಅಮಾನತು ಆದೇಶ ಮಾಡಲಾಗುವುದು. ಚುನಾವಣೆ ಕರ್ತವ್ಯ ಕಡ್ಡಾಯವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಗತ್ಯಬಿದ್ದರೆ ಕ್ರಿಮಿನಲ್‌ ಪ್ರಕರಣ ಕೂಡಾ ದಾಖಲಿಸುವುದಕ್ಕೆ ಅವಕಾಶವಿದೆ. ಚುನಾವಣೆ ಕಾರ್ಯದ ಗಂಭೀರತೆಯನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸಭೆಗೆ ತಡವಾಗಿ ಬಂದಿರುವುದಕ್ಕೆ ಯಾವುದೇ ನೆಪಗಳನ್ನು ಹೇಳುವಂತಿಲ್ಲ. ಚುನಾವಣೆ ಕರೆಗೆ ಪರ್ಯಾಯವಾಗಿ ಏನೂ ಹೇಳುವಂತಿಲ್ಲ. ಸಮಯಕ್ಕೆ ಸರಿಯಾಗಿ ಹಾಜರಾಗಿ ಚುನಾವಣಾ ಆಯೋಗದಿಂದ ಬರುವ ಸೂಚನೆಗಳನ್ನು ಪಾಲನೆ ಮಾಡುವುದಕ್ಕೆ ಗಮನ ಹರಿಸಬೇಕು ಎಂದು ಹೇಳಿದರು.

ವಿವಿಧ ಹಂತಗಳಲ್ಲಿ ಕೆಲಸ ಮಾಡುವುದಕ್ಕೆ ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ತಮಗೆ ನೀಡಿರುವ ಹುದ್ದೆಗೆ ಅನುಗುಣವಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಬೇಕು. ಹುದ್ದೆ ಬದಲಾಯಿಸುವಂತೆ ಪದೇ ಪದೇ ಜಿಲ್ಲಾಧಿಕಾರಿ ಕಚೇರಿಗೆ ಮೇಲಿನಿಂದ ರಾಜಕೀಯ ಒತ್ತಡ ತರಬಾರದು ಎಂದು ತಿಳಿಸಿದರು.

ಕೊಟ್ಟಿರುವ ಜವಾಬ್ದಾರಿಯನ್ನು ಬದಲಾಯಿಸುವುದಕ್ಕೆ ಆಗುವುದಿಲ್ಲ. ಬದಲಾವಣೆ ಮಾಡುವುದು ಶುರುವಾದರೆ ಎಲ್ಲರೂ ಅದನ್ನೇ ಮಾಡಲಾರಂಭಿಸುತ್ತಾರೆ. ಚುನಾವಣೆಯ ಗಂಭೀರತೆಯನ್ನು ತಿಳಿದುಕೊಂಡು ಕೊಟ್ಟಿರುವ ಕೆಲಸ ಮಾಡಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ. ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಹಾಗೂ ವಲಯ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.