ADVERTISEMENT

ಜಿಪಿಎಸ್‌ ನಿಯಮಾವಳಿ ಸರಳೀಕರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:48 IST
Last Updated 8 ಜುಲೈ 2017, 5:48 IST

ರಾಯಚೂರು: ಗ್ರಾಮ ಪಂಚಾಯಿತಿಯಿಂದ ಹಂಚಿಕೆ ಮಾಡುವ ವಸತಿಗಳ ಯೋಜನೆಗೆ ಸಂಬಂಧಿಸಿದಂತೆ ಜಿಪಿಎಸ್‌ ನಿಯಮಾವಳಿಗಳನ್ನು ಸರಳೀಕರಣ ಮಾಡಲಾಗುತ್ತಿದೆ ಎಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನೀಷ್ ಮೌದ್ಗಿಲ್ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಸತಿ ಯೋಜನೆ ಗಳ ಪ್ರಗತಿ ಪರಿಶೀಲನಾ ಸಭೆಯಯಲ್ಲಿ ಮಾತನಾಡಿದರು.

ಮೊದಲ ಹಂತದ ಕಾಮಗಾರಿ ಮುಗಿದ ಕೂಡಲೇ ಹಣ ಬಿಡುಗಡೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮ ವಹಿಸಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಇದರ ಉಸ್ತುವಾರಿ ನೋಡಿ ಕೊಳ್ಳಬೇಕಾಗುತ್ತದೆ. ವಸತಿ ಯೋಜನೆಯಡಿ ಅವ್ಯವಹಾರ ನಡೆಯುವುದಕ್ಕೆ ಅವಕಾಶವಿಲ್ಲ ಎಂದರು.

ದೇವದುರ್ಗ ತಾಲ್ಲೂಕಿನಲ್ಲಿ ಒಬ್ಬನೇ ಫಲಾನುಭವಿಗೆ ನಾಲ್ಕು ಮನೆಗಳನ್ನು ಮಂಜೂರಿ ಮಾಡಿರುವುದು ದಾಖಲೆಗಳ ಸಮೇತ ಸಿಕ್ಕಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಏನು ಮಾಡುತ್ತಿದ್ದಾರೆ. ಮಂಜೂರಿಯಾಗಿದ್ದ ಮನೆಗಳೆಲ್ಲ ಎಲ್ಲಿವೆ ಎಂಬುದನ್ನು ತೋರಿಸಬೇಕು ಎಂದು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ದೇವದುರ್ಗ ತಾಲ್ಲೂಕಿಗೆ ವಿವಿಧ ವಸತಿ ಯೋಜನೆಗಳಡಿ 2005 ರಿಂದ ಇಲ್ಲಿಯವರೆಗೂ 50 ಸಾವಿರ ಮನೆಗಳುಮಂಜೂರಿಯಾಗಿವೆ. ಫಲಾನುಭವಿಗಳನ್ನೆಲ್ಲ ದಾಖಲೆ ಸಮೇತ ತೋರಿಸಬೇಕು. ತಪ್ಪು ನಡೆದಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದರೂ ಇಒ ಅವರು ಕ್ರಮಕ್ಕಾಗಿ ಹಿಂದೇಟು ಹಾಕುತ್ತಿರುವುದೇಕೆ? ಲಂಚ ನೀಡಿದವರಿಗೆ ಪಿಡಿಒಗಳು ಮನೆಗಳನ್ನು ಮಂಜೂರಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ ಎಂದರು.

ವಸತಿ ಯೋಜನೆ ಅನುಷ್ಠಾನಕ್ಕೆ ವಿಳಂಬ ಅನುಸರಿಸುತ್ತಿರುವ ಬಗ್ಗೆ ಕೂಡಲೇ ಎಲ್ಲ ಪಿಡಿಒಗಳಿಗೆ ತಾಲ್ಲೂಕು ಪಂಚಾಯಿತಿ ಇಒಗಳು ಪತ್ರ ಬರೆಯಬೇಕು. ನಿಗದಿತ ಗುರಿ ಸಾಧಿಸದ ಪಂಚಾಯಿತಿಗೆ ನೋಟಿಸ್‌ ನೀಡಬೇಕು. ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.

ವಿಳಂಬಕ್ಕೆ ಸ್ಪಷ್ಟ ಮಾಹಿತಿಯನ್ನು ತಯಾರಿಸಿ ಕಳುಹಿಸಿ ಕೊಡಬೇಕು. ವಾಸ್ತವ ವರದಿ ಸಲ್ಲಿಸಲು ವಿಳಂಬ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಸೂಚನೆ ನೀಡಿದರು.ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಓ ಕುರ್ಮಾರಾವ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.