ADVERTISEMENT

ಜ.30ರಿಂದ ಹಮಾಲಿಗಳ ಭವಿಷ್ಯ ನಿಧಿ ಜಾರಿಗೆ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:43 IST
Last Updated 12 ಜನವರಿ 2017, 10:43 IST

ಸಿಂಧನೂರು: ಹಮಾಲಿ ಕಾರ್ಮಿಕರ ಭವಿಷ್ಯ ನಿಧಿ ಜಾರಿಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯದ ಸಾವಿರಾರು ಹಮಾಲಿ ಕಾರ್ಮಿಕರು ಜ.31 ರಂದು ಬೆಂಗಳೂರಿನ ವಿಧಾನಸೌಧದ ಎದುರು ಅನಿರ್ಧಿಷ್ಠಾವಧಿ ಅಹೋರಾತ್ರಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರ, ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಶ್ರಮಜೀವಿ ಹಮಾಲಿ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳು ಪಶ್ಚಿಮ ಬಂಗಾಲದಲ್ಲಿ ಜಾರಿಯಲ್ಲಿರುವ ಭವಿಷ್ಯ ನಿಧಿ ಯೋಜನೆ  ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಕುರಿತು ಹಲವು ಹಂತದ ಉನ್ನತ ಸಭೆಗಳು ನಡೆದಿವೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿಯೇ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ 146 ಮುಖ್ಯ ಮಾರುಕಟ್ಟೆ, 383 ಉಪಮಾರುಕಟ್ಟೆಗಳಲ್ಲಿ ಪುರುಷ ಹಾಗೂ ಮಹಿಳಾ ಹಮಾಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಕ್ಕಿ ಗಿರಿಣಿ, ಎಣ್ಣೆ, ಬೇಳೆ,  ಅನ್ನಭಾಗ್ಯ, ಎಫ್‌ಸಿಐ ಗೋದಾಮು, ರೇಷ್ಮೆ ಮಾರುಕಟ್ಟೆ, ರೈಲ್ವೆ ಗೂಡ್‌ಶೇಡ್, ರಾಜ್ಯ ಮತ್ತು ಕೇಂದ್ರ ವೇರ್‌ಹೌಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಹಮಾಲಿಗಳ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಎಪಿಎಂಸಿಗಳಲ್ಲಿ ಕಾಯಕ ನಿಧಿ ಯೋಜನೆಯಡಿ ನಿವೃತ್ತಿ ವೇತನ, ಉಚಿತ ನಿವೇಶನ, ವಸತಿ ಯೋಜನೆ ಜಾರಿಗೊಳಿಸಬೇಕು. ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ, ವಿಶ್ರಾಂತಿ ಗೃಹ, ಗುರುತಿನ ಚೀಟಿ, ಆಮ್ ಆದ್ಮಿ ಭೀಮಾ ಯೋಜನೆ, ಬೋನಸ್, ಗ್ರಾಚ್ಯುಟಿ, ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ, ಹಮಾಲಿ ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ತಿಪ್ಪಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಯಂಕಪ್ಪ ಕೆಂಗಲ್, ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.