ADVERTISEMENT

ದೇವದುರ್ಗ: 23 ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:16 IST
Last Updated 11 ಸೆಪ್ಟೆಂಬರ್ 2017, 7:16 IST

ದೇವದುರ್ಗ: ತಾಲ್ಲೂಕಿನ ಮೇದರಗೋಳ ಗ್ರಾಮದ ಮರಳು ಸಂಗ್ರಹಣೆ ಕೇಂದ್ರದ ಮೂಲಕ ಸರ್ಕಾರದ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 23 ಟಿಪ್ಪರ್‌ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇದರಗೋಳ ಗ್ರಾಮದ ಬಳಿಯಿರುವ ನದಿಯಿಂದ ಮರಳನ್ನು ಮೇಲೆ ತಂದು ಅದನ್ನು ಮರಳು ಸಂಗ್ರಹಣೆ ಕೇಂದ್ರದಲ್ಲಿ ಸಂಗ್ರಹಿಸಿ ನಂತರ ಸರ್ಕಾರದ ನಿಯಮದಂತೆ ಮಾರಾಟ ಮಾಡಲಾಗುತ್ತಿದ್ದು, ಭಾನುವಾರ 23 ಟಿಪ್ಪರ್‌ಗಳಲ್ಲಿ ಮರಳು ಸಂಗ್ರಹಣೆ ಕೇಂದ್ರದಿಂದ ಹೆಚ್ಚುವರಿ ಮರಳನ್ನು ಸಾಗಿಸಲಾಗುತ್ತದೆ ಎಂದು ನಗರಗುಂಡ ಗ್ರಾಮದ ಮುಖಂಡರು ಆರೋಪಿಸಿದರು.

ಕನ್ನಡ ರಕ್ಷಣಾ ವೇದಿಕೆ ಮತ್ತು ಮಾದಿಗ ದಂಡೋರ್‌ ಸಂಘಟನೆಯ ಮುಖಂಡರು ದೇವದುರ್ಗ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ ನಂತರ ಎಸ್‌ಐ ಬಿ.ಎಸ್‌.ಹೊಸಳ್ಳಿ ಅವರು ಕೂಡಲೇ ಸ್ಥಳಕ್ಕೆ ಬಂದು 23 ಟಿಪ್ಪರ್‌ ಲಾರಿಗಳನ್ನು ವಶಪಡಿಸಿಕೊಂಡರು.

ADVERTISEMENT

‘ಒಂದು ಲಾರಿ ಸುಮಾರು 16 ಟನ್‌ವರೆಗೂ ಮರಳನ್ನು ಸಾಗಣೆ ಮಾಡುವ ಅಧಿಕಾರ ಹೊಂದಿದ್ದರೂ ಹೆಚ್ಚುವರಿಯಾಗಿ ಪ್ರತಿ ಲಾರಿಯಲ್ಲಿ 10 ಟನ್‌ ಮರಳು ಇರುವುದು ವೇ ಬ್ರಿಡ್ಜ್‌ನಿಂದ ಪತ್ತೆಯಾಗಿದೆ. ಈ ಬಗ್ಗೆ ವಿಚಾರಣೆ ಅಧಿಕಾರ ಜಿಲ್ಲಾ ಭೂ ವಿಜ್ಞಾನ ಅಧಿಕಾರಿಗಳಿಗೆ ಇರುವುದರಿಂದ ಅವರಿಗೆ ಲಿಖಿತ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.