ADVERTISEMENT

‘ನೆಮ್ಮದಿ ಊರು’ ಯೋಜನೆಗೆ ಮಾನ್ವಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:01 IST
Last Updated 16 ಏಪ್ರಿಲ್ 2017, 9:01 IST

ಮಾನ್ವಿ : ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ‘ನೆಮ್ಮದಿ ಊರು’ ಯೋಜನೆಗೆ ಮಾನ್ವಿ ಪಟ್ಟಣ ಆಯ್ಕೆಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನೆಮ್ಮದಿ ಊರು’ ಯೋಜನೆ ಅಡಿಯಲ್ಲಿ ಮಾನ್ವಿ ಪುರಸಭೆಗೆ ₹7.5ಕೋಟಿ ಮಂಜೂರಾಗಿದೆ. ಈ ಅನುದಾನದಲ್ಲಿ ಟೌನ್‌ ಹಾಲ್‌, ಮೂರು ಉದ್ಯಾನಗಳು ಮತ್ತು ಪುರಸಭೆ ಮಳಿಗೆಗಳ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜು,  ಹಿರೇಕೊಟ್ನೇಕಲ್‌, ಕಲ್ಲೂರು, ಕುರ್ಡಿ ಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಬರುವ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ. ಸಿರವಾರ ಸರ್ಕಾರಿ ಪದವಿ ಕಾಲೇಜು  ಕಟ್ಟಡ ನಿರ್ಮಾಣಕಾಮಗಾರಿ ಆರಂಭಿಸಲಾಗುವುದು.

ಮಾನ್ವಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ₹70ಲಕ್ಷ ವೆಚ್ಚದಲ್ಲಿ ಹೆಚ್ಚುವರಿ 10ಕೊಠಡಿ, ₹67ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಮತ್ತು ಪ್ರಯೋಗಾಲಯ ನಿರ್ಮಿಸಲಾಗುವುದು. ₹18ಕೋಟಿ ವೆಚ್ಚದಲ್ಲಿ  ಸಿರವಾರದಲ್ಲಿ ಕಿತ್ತೂರ ಚೆನ್ನಮ್ಮ ವಸತಿ ಶಾಲೆ ಕಟ್ಟಡ , ₹1.62ಕೋಟಿ ವೆಚ್ಚದಲ್ಲಿ ಕವಿತಾಳದ ಸರ್ಕಾರಿ ಪ್ರೌಢಶಾಲೆ ಕಟ್ಟಡ, ₹1.75ಕೋಟಿ ವೆಚ್ಚದಲ್ಲಿ ಮಾನ್ವಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕಟ್ಟಡ, ಬಾಗಲವಾಡ, ಅತ್ತನೂರು ಮತ್ತು ಮಾಡಗಿರಿ ಪ್ರೌಢಶಾಲೆಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ₹14ಕೋಟಿ ವೆಚ್ಚದಲ್ಲಿ ಕವಿತಾಳದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು.

ADVERTISEMENT

ಮಾನ್ವಿ ಪಟ್ಟಣದಲ್ಲಿ ಸರ್ಕಿಟ್‌ ಹೌಸ್‌ ನಿರ್ಮಾಣ, ₹75ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ, ₹20ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡದ ಮೇಲ್ಮಹಡಿ ಕೊಠಡಿ, ಪೋತ್ನಾಳದಲ್ಲಿ ₹40ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ, ಕಲ್ಲೂರು ಗ್ರಾಮದಲ್ಲಿ ₹40ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ  ಕ್ರಮ ಕೈಗೊಳ್ಳಲಾಗುವುದು.
ಶಾಸಕರ ಅನುದಾನದ ₹40ಲಕ್ಷ ವೆಚ್ಚದಲ್ಲಿ ಶಾದಿಮಹಲ್‌ ಮೂಲಕ ಶಾರದಾ ಶಾಲೆವರೆಗಿನ ರಸ್ತೆ ಅಭಿವೃದ್ಧಿಪಡಿಸ ಲಾಗುವುದು ಎಂದರು.
ಶಾಸಕ ಜಿ.ಹಂಪಯ್ಯ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್‌ ಇಲಿಯಾಸ್‌ ಖಾದ್ರಿ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಗಫೂರ್‌ ಸಾಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.