ADVERTISEMENT

ಪ್ರಮುಖ ಪಕ್ಷಗಳಿಗೆ ಸವಾಲಾದ ಮಹಿಳಾ ನಾಯಕಿಯರು

ಟಿಕೆಟ್‌ ಕೊಡದಿರುವುದಕ್ಕೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಲು ಸಜ್ಜು

ನಾಗರಾಜ ಚಿನಗುಂಡಿ
Published 18 ಏಪ್ರಿಲ್ 2018, 10:28 IST
Last Updated 18 ಏಪ್ರಿಲ್ 2018, 10:28 IST

ರಾಯಚೂರು: ಜಿಲ್ಲೆಯ ದೇವದುರ್ಗ ವಿಧಾನಸಭೆ ಕ್ಷೇತ್ರ ಹಾಗೂ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ವಿರುದ್ಧ ಸಿಡಿದೆದ್ದಿರುವ ಇಬ್ಬರು ಮಹಿಳೆಯರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದು ಗಮನ ಸೆಳೆಯುತ್ತಿದೆ.

ದೇವದುರ್ಗ ತಾಲ್ಲೂಕು ಜೆಡಿಎಸ್‌ ಘಟಕವನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡು ಬಂದಿದ್ದ ಕರಿಯಮ್ಮ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂದು ಕಾದಿದ್ದರು. ಆದರೆ, ಬಿಜೆಪಿ ತೊರೆದು ಜೆಡಿಎಸ್‌ ಸೇರಿದ ವೆಂಕಟೇಶ ಪೂಜಾರಿ ಅವರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಲಾಯಿತು.

ಜೆಡಿಎಸ್‌ ತಾಲ್ಲೂಕು ಘಟಕದ ಕೆಲ ಪದಾಧಿಕಾರಿಗಳು ಸೇರಿದಂತೆ ಹಲವರು ಜೆಡಿಎಸ್‌ ವರಿಷ್ಠರನ್ನು ಈ ಬಗ್ಗೆ ಮನವರಿಕೆ ಮಾಡಿ, ಕರಿಯಮ್ಮ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸಿ ಸೋತರು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಕರಿಯಮ್ಮ ಅವರಿಗೆ ಮನವೊಲಿಸಲು ವರಿಷ್ಠರು ಯತ್ನಿಸಿ ವಿಫಲರಾದರು. ಇದೀಗ ದೇವದುರ್ಗ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೆ ಕರಿಯಮ್ಮ ಸಿದ್ಧತೆ ಮಾಡಿಕೊಂಡಿದ್ದಾರೆ.

ADVERTISEMENT

2016 ರಲ್ಲಿ ದೇವದುರ್ಗದಲ್ಲಿ ನಡೆದ ವಿಧಾನಭೆ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕರಿಯಮ್ಮ ಅವರು 9,156 ಮತಗಳನ್ನು ಪಡೆದಿದ್ದರು. ಆನಂತರ ದಿನಗಳಲ್ಲಿ ಪಕ್ಷದಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಗೆಲುವಿಗಾಗಿ ತಮ್ಮದೇ ಲೆಕ್ಕಾಚಾರ ಹಾಗೂ ಬೆಂಬಲಿಗರನ್ನು ಕಟ್ಟಿಕೊಂಡಿದ್ದರು. ಇದೀಗ ಕರಿಯಮ್ಮ ಅವರನ್ನು ಬೆಂಬಲಿಸಿ ಜೆಡಿಎಸ್‌ ತಾಲ್ಲೂಕು ಪದಾಧಿಕಾರಿಗಳು ಹೊರಬಂದು ಕೆಲಸ ಮಾಡುತ್ತಿದ್ದು, ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ವೆಂಕಟೇಶ ಪೂಜಾರಿ ಅವರಿಗೆ ದೊಡ್ಡ ಮುಳುವಾಗಿ ಪರಿಣಮಿಸಿದೆ. ಕರಿಯಮ್ಮ ಸ್ಪರ್ಧೆಯಿಂದ ಜೆಡಿಎಸ್‌ಗೆ ಬರಬೇಕಾಗಿದ್ದ ಮತಗಳು ಒಡೆದುಹೋಗುತ್ತವೆ ಎನ್ನು ಆತಂಕ ಕಾಡುತ್ತಿದೆ.

ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಎಂ.ವೀರಣ್ಣ ಅವರು ತಮ್ಮ ಸೊಸೆಯನ್ನು ಚುನಾವಣೆ ಕಣಕ್ಕೆ ಇಳಿಸುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರವು ಕಾಂಗ್ರೆಸ್‌ ಪಕ್ಷದ ಭದ್ರಕೋಟೆ. ಇದೀಗ ಕಾಂಗ್ರೆಸ್‌ನಿಂದ ಹೊರಬಂದಿರುವ ಎಂ.ವೀರಣ್ಣ ಭದ್ರಕೋಟೆಯನ್ನು ಛಿದ್ರಗೊಳಿಸುವ ಯೋಜನೆ ರೂಪಿಸಿದ್ದಾರೆ. ಇಂದಿರಾ ಕ್ಯಾಂಟಿನ್‌ ಆರಂಭಗೊಳ್ಳುವ ಮೊದಲೆ ಮಾನ್ವಿಯಲ್ಲಿ ಅಣ್ಣಾ ಕ್ಯಾಂಟಿನ್‌ಗಳನ್ನು ಆರಂಭಿಸಿ, ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಎಂ.ವೀರಣ್ಣ ಅವರು ಗೆಲುವಿನ ಗುರಿಯೊಂದಿಗೆ ಸಂಚರಿಸುತ್ತಿದ್ದಾರೆ.

ವೈದ್ಯರಾದ ಡಾ. ತನುಶ್ರೀ ಅವರು ಮತಯಾಚನೆ ಆರಂಭಿಸಿದ್ದು, ರಾಜಕೀಯ ಕ್ಷೇತ್ರದ ಮೂಲಕ ಸಮಾಜಸೇವೆಗೆ ಸಿದ್ಧಗೊಂಡಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕ ಹಂಪಯ್ಯ ನಾಯಕ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ. ಇದೀಗ ಕಾಂಗ್ರೆಸ್‌ ಹಾಗೂ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

**

ಅರಕೇರಾದ ಕುಟುಂಬ ರಾಜಕಾರಣದಿಂದ ಕ್ಷೇತ್ರದಲ್ಲಿ ಜನರು ಬೇಸತ್ತಿದ್ದಾರೆ. ಪರ್ಯಾಯ ರಾಜಕೀಯ ಶಕ್ತಿಯನ್ನು ನಾನು ಹುಟ್ಟುಹಾಕಿದ್ದು, ಜನರು ನನ್ನನ್ನು ಬೆಂಬಲಿಸುತ್ತಾರೆ – ಕರಿಯಮ್ಮ

**

40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗ ಸೊಸೆಗೆ ಟಿಕೆಟ್‌ ನೀಡುವಂತೆ ಕೇಳಿದರೂ ಕೊಟ್ಟಿಲ್ಲ. ಪಕ್ಷೇತರಳಾಗಿ ಸೊಸೆಯನ್ನು ಕಣಕ್ಕೆ ಇಳಿಸುತ್ತಿದ್ದೇನೆ – ಎಂ.ವೀರಣ್ಣ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.