ADVERTISEMENT

ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ

ಮೆಹಬೂಬ ಹುಸೇನ
Published 24 ಏಪ್ರಿಲ್ 2017, 5:34 IST
Last Updated 24 ಏಪ್ರಿಲ್ 2017, 5:34 IST
ಶರಣಪ್ಪ
ಶರಣಪ್ಪ   

ಕನಕಗಿರಿ: ಬಡ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು  ಸತತ ಅಧ್ಯಯನ, ಕಠಿಣ ಶ್ರಮ ಮತ್ತು  ಶ್ರದ್ಧೆಯಿಂದ ಅಧ್ಯಯನ ಮಾಡಿ  ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ–2014ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಮೀಪದ ಗೌರಿಪುರ ಗ್ರಾಮದ  ಶರಣಪ್ಪ ವರ್ನ್‌ಖೇಡ ಅವರು ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಲ್ಲಿ ಡಿವೈಎಸ್‌ಪಿಯಾಗಿ ಆಯ್ಕೆ ಯಾಗಿದ್ದಾರೆ.

ತಂದೆ ಕುಂಟೆಪ್ಪ, ತಾಯಿ ದುರಗಮ್ಮ ಇಬ್ಬರೂ ಅನಕ್ಷರಸ್ಥರು. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳ ಪೈಕಿ ಶರಣಪ್ಪ ಹಿರಿಯರು.

ADVERTISEMENT

ಮನೆಯಲ್ಲಿ ಬಡತನ, ಶಿಕ್ಷಣ ಕೊಡಿಸಲು ಹಣಕಾಸಿನ ಸಮಸ್ಯೆ, ಮಗನ ಓದಿನ ಆಸಕ್ತಿ ಅರಿತ ತಂದೆ– ತಾಯಿಗಳಿಬ್ಬರೂ ನೀರಾವರಿ ಪ್ರದೇಶದಲ್ಲಿ ಭತ್ತದ ಸಸಿ ನಾಟಿ ಮಾಡಿ  ಪಿಯುಸಿ, ಟಿಸಿಎಚ್‌  ವರೆಗೆ ಶಿಕ್ಷಣ ಕೊಡಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ  ಪ್ರೌಢಶಾಲೆ ವರೆಗೆ  ಗೌರಿಪುರ  ಕನಕಗಿರಿ,  ಯಲಬುರ್ಗಾ ತಾಲ್ಲೂಕಿನ ಗಾಣದಾಳ ಮತ್ತು ಗಂಗಾವತಿಯಲ್ಲಿ ಅವರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ.

‘6ರಿಂದ 8ನೇ ತರಗತಿ ಕಲಿಯಲು ಗೌರಿಪುರದಿಂದ ಕನಕಗಿರಿ ವರೆಗೆ ದಿನಾಲೂ ಹತ್ತಾರು ಕಿ.ಮೀ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದರು’ ಎಂದು ಸ್ನೇಹಿತರು ಸ್ಮರಿಸುತ್ತಾರೆ.

ಪಿಯುಸಿ ಶಿಕ್ಷಣವನ್ನು ವಸತಿ ನಿಲಯದಲ್ಲಿದ್ದುಕೊಂಡು ಮುಂಡರಗಿಯಲ್ಲಿ,  ಟಿಸಿಎಚ್‌ ಶಿಕ್ಷಣ ಬಳ್ಳಾರಿಯಲ್ಲಿ ಅಧ್ಯಯನ ಮಾಡಿ 1999ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು.

ಕಾರಟಗಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಹಾಗೂ ಬಿಇಡಿಯನ್ನು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪೂರೈಸಿದ್ದಾರೆ.

2010ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್‌)ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾರಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

2014ರಲ್ಲಿ  ಕೊಪ್ಪಳ ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು, ಈಗ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗ ಶನಿವಾರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಶರಣಪ್ಪ ಅವರು  ಒಟ್ಟು 1,950 ಅಂಕಗಳಿಗೆ 1105. 5 ಅಂಕಗಳನ್ನು  ಪಡೆದು ಡಿವೈಎಸ್‌ಪಿ ಹುದ್ದೆ ಪಡೆದಿದ್ದಾರೆ.

‘ತಂದೆ, ತಾಯಿ ಆಶೀರ್ವಾದ, ಸ್ನೇಹಿತರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಸತತ ಅಧ್ಯಯನ ಮತ್ತು ಯಾವುದೇ ತರಬೇತಿಗೆ ಹಾಜರಾಗದೆ ಪರೀಕ್ಷೆ ಬರೆದ ಹೆಮ್ಮೆ ನನಗೆ ಇದೆ’ ಎಂದು ಶರಣಪ್ಪ ವರ್ನ್‌ಖೇಡ ಪ್ರತಿಕ್ರಿಯಿಸಿದರು.

ಶರಣಪ್ಪ ಅವರ ಸಾಧನೆಗೆ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಜಿಲ್ಲಾ ಪಂಚಾಯಿತಿ  ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಪ್ಪ ಎಚ್.ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.