ADVERTISEMENT

ಮರಾಠ ಗ್ರಾಮದಲ್ಲಿ ಶಿಕ್ಷಕರದ್ದೇ ಕೊರತೆ

ಸೌಲಭ್ಯ ಕಾಣದ ಗ್ರಾಮ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 8:29 IST
Last Updated 3 ಜನವರಿ 2017, 8:29 IST

-ಕೃಷ್ಣ ಸಿರವಾರ

ಸಿರವಾರ: ಸಮೀಪದ ಮರಾಠ ಗ್ರಾಮದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಮತ್ತು ಶಿಕ್ಷಕರ ಕೊರತೆ ಇದೆ. ಸಮರ್ಪಕ ಚರಂಡಿ ವ್ಯವಸ್ಥೆ, ಶೌಚಾಲಯ, ನೀರಿನ ಸೌಲಭ್ಯ ಇಲ್ಲದ ಕಾರಣ ಗ್ರಾಮಸ್ಥರು ತೊಂದರೆ ಪಡುವಂತಾಗಿದೆ.

‘ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 224 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಗೆ 8 ಕೊಠಡಿಗಳ ಅವಶ್ಯಕತೆಯಿದ್ದು, ಈಗಿರುವ ನಾಲ್ಕು ಕೊಠಡಿಗಳ ಗೋಡೆಗಳು ಎಲ್ಲಂದೆರಲ್ಲಿ ಬಿರುಕು ಬಿಟ್ಟಿವೆ. ಮೇಲ್ಛಾವಣಿ ಶಿಥಿಲಗೊಂಡಿದೆ. ಇದರಿಂದ ಮಕ್ಕಳು ಭಯದಲ್ಲೇ ಪಾಠ ಕೇಳುವಂತಾಗಿದೆ’ ಎಂದು ಗ್ರಾಮದ ಪ್ರಭಾಕರ ದೂರುತ್ತಾರೆ.

‘2015-16ನೇ ಸಾಲಿನಲ್ಲಿ ಶಾಲೆಗೆ ಸ್ವಲ್ಪ ದೂರದಲ್ಲಿ ನಾಲ್ಕು ಕೊಠಡಿಗಳ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಇಲ್ಲಿ 4 ರಿಂದ 7ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಬಿರುಕು ಬಿಟ್ಟ ಕೋಣೆಯ ಪಕ್ಕದಲ್ಲಿ ಮೂರು ಕೊಠಡಿಗಳಿದ್ದು,  ಅವುಗಳಲ್ಲಿ ಒಂದು ಕಾರ್ಯಾಲಯ, ಇನ್ನು ಎರಡು ಕೊಠಡಿಗಳಲ್ಲಿ 1ರಿಂದ 3ನೇ ತರಗತಿಗಳು ನಡೆಯುತ್ತಿವೆ. ಶಾಲೆಗೆ 8 ಶಿಕ್ಷಕರ ಅಗತ್ಯವಿದ್ದು, 5 ಶಿಕ್ಷಕರು ಮಾತ್ರ ಇದ್ದಾರೆ. ಗಣಿತ ಮತ್ತು ಆಂಗ್ಲ ಭಾಷೆಯ ಶಿಕ್ಷಕರ ಕೊರತೆಯಿದೆ. ಶಾಲೆಯಲ್ಲಿ ಮೂರು ಶೌಚಾಲಯ ನಿರ್ಮಿಸಲಾಗಿದ್ದು, ಅವುಗಳನ್ನು ಬಳಕೆ ಮಾಡದ ಕಾರಣ ಮಣ್ಣು ತುಂಬಿಕೊಂಡಿದೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಶಾಲೆಯಲ್ಲಿ ಬಿಸಿಯೂಟಕ್ಕಾಗಿ ಪ್ರತ್ಯೇಕ ಕೊಠಡಿ ಮತ್ತು ಅಡುಗೆ ಅನಿಲ ವ್ಯವಸ್ಥೆ ಇದ್ದರೂ ಉರುವಲು ಮತ್ತು ಬಯಲಿನಲ್ಲಿಯೇ ಅಡುಗೆ ಮಾಡಲಾಗುತ್ತಿದೆ ಎಂದು ಅಡುಗೆ ಸಿಬ್ಬಂದಿ ಹೇಳುತ್ತಾರೆ.

ಬಿರುಕು ಬಿಟ್ಟ ಕೊಠಡಿಯಲ್ಲಿ ಬಿಸಿಯೂಟದ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ ಇದರಿಂದ ಆಹಾರದಲ್ಲಿ ಶುಚಿತ್ವ ಇಲ್ಲದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಶಿಕ್ಷಕರ ಕೊರತೆ ನಿವಾರಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.