ADVERTISEMENT

ರಥೋತ್ಸವ ಜಮೀನಿಗೆ ಸಿಗದ ಪರಿಹಾರ

ಫೆ. 15ರಿಂದ ನೀರಮಾನ್ವಿ ರೇಣುಕಾ ಯಲ್ಲಮ್ಮ ಜಾತ್ರೆ

ಬಸವರಾಜ ಬೋಗಾವತಿ
Published 23 ಜನವರಿ 2017, 9:43 IST
Last Updated 23 ಜನವರಿ 2017, 9:43 IST

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದ ಪ್ರಸಿದ್ಧ ಶ್ರೀರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಯ ರಥೋತ್ಸವ ನಡೆಯುವ ಜಮೀನಿನ ಬೆಳೆ ಪರಿಹಾರ ಅಥವಾ ಬಾಡಿಗೆ ನೀಡುವಂತೆ ಒತ್ತಾಯಿಸಿ ಜಮೀನಿನ ಮಾಲೀಕ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಜಮೀನಿನ ಮಾಲೀಕ ದೊಡ್ಡಬಸವರಾಜಪ್ಪ ಈ ಕುರಿತು ತಹಶೀಲ್ದಾರ್‌ ಎಸ್‌.ಟಿ.ಯಂಪುರೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರಿಂದ ಫೆ.15ರಂದು ನಡೆಯುವ ಜಾತ್ರೆಯ ರಥೋತ್ಸವಕ್ಕೆ ಕಾನೂನಿನ ಅಡಚಣೆ  ಉಂಟಾಗುವ ಸಂಭವ ಇದೆ ಎಂಬುದು ಸ್ಥಳೀಯರ ಆತಂಕ.

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ  ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ನಡೆಯುವ ಈ ದೇವಸ್ಥಾನದ ರಥೋತ್ಸವಕ್ಕೆ ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ರಥೋತ್ಸವದ ಮೆರವಣಿಗೆಯು ದೇವಸ್ಥಾನದ ಎದುರಿನ ಸರ್ವೆ ನಂ. 290/2 ರ ಜಮೀನಿನಲ್ಲಿ ನಡೆಯುತ್ತದೆ. ಸದರಿ ಜಮೀನು 8.04ಎಕರೆ ವಿಸ್ತೀರ್ಣ ಹೊಂದಿದ್ದು  ರೈತ ದೊಡ್ಡ ಬಸವರಾಜಪ್ಪ ಜಮೀನಿನ ಮಾಲೀಕರಾಗಿದ್ದಾರೆ.

‘ಈ ಜಮೀನಿನಲ್ಲಿ ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಭತ್ತ, ಹತ್ತಿ, ಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಜಾತ್ರೆಯ ಸಂದರ್ಭದಲ್ಲಿ  ರಥೋತ್ಸವದ ಮೆರವಣಿಗಾಗಿ ಈ ಜಮೀನಿನ ಒಂದು ಭಾಗದಲ್ಲಿ ಬೆಳೆಯಲಾದ ಬೆಳೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿ  ಸ್ವಚ್ಛಗೊಳಿಸುತ್ತಾರೆ.

ಹಾನಿಯಾಗುವ ಬೆಳೆ ಪರಿಹಾರವನ್ನು ಇದುವರೆಗೂ ನೀಡಿಲ್ಲ’ ಎಂಬುದು ದೊಡ್ಡ ಬಸವರಾಜಪ್ಪ ಅವರ ಆರೋಪ. ‘ಈ ಕುರಿತು ಹಲವು ವರ್ಷಗಳಿಂದ ಹಾನಿಗೊಳಗಾಗುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಅವರು.

‘ಕಳೆದ ವರ್ಷ ಮಾನ್ವಿ ತಹಶೀಲ್ದಾರ್‌ ಆಗಿ ಕರ್ತವ್ಯದಲ್ಲಿದ್ದ ಸಿದ್ದಲಿಂಗಪ್ಪ ನಾಯಕ  ಬೆಳೆಹಾನಿ ಕುರಿತು ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಪ್ರಕಾರ ಒಟ್ಟು 8.04 ಎಕರೆ ಪೈಕಿ 3 ಎಕರೆಯಲ್ಲಿ ಬೆಳೆದ 9ಕ್ವಿಂಟಲ್‌ ಹತ್ತಿ ಬೆಳೆ ಹಾನಿಯಾಗಿದ್ದು ₹36ಸಾವಿರ ಪರಿಹಾರ ಕೊಡಬಹುದು ಎಂದು ತಹಶೀಲ್ದಾರ್ ಸಿದ್ದಲಿಂಗಪ್ಪ ನಾಯಕ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು’ ಎನ್ನುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೆಳೆ ಹಾನಿ ಪರಿಹಾರ ಅಥವಾ ಜಮೀನಿನ ಬಾಡಿಗೆ ನಿಗದಿ  ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.‘ಪ್ರಸ್ತುತ ₹2.5ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ  ನಡೆಯುತ್ತಿವೆ. ಲಕ್ಷಾಂತರ ರೂಪಾಯಿ ಆದಾಯ ಇರುವ ದೇವಸ್ಥಾನದ ಬಗ್ಗೆ ಕಾಳಜಿವಹಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಖಾಸಗಿ ಜಮೀನಿನಲ್ಲಿ ನಡೆಯುವ ರಥೋತ್ಸವ ಸಂಬಂಧ ಪರಿಹಾರ ತೀರ್ಮಾನ ಕೈಗೊಳ್ಳದಿರುವುದು ಸರಿಯಲ್ಲ’ ಎಂದು ದೂರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.