ADVERTISEMENT

ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಸಿ.ಎಂ.

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 8:12 IST
Last Updated 4 ಸೆಪ್ಟೆಂಬರ್ 2015, 8:12 IST

ರಾಯಚೂರು: ಮಾನ್ವಿ ತಾಲ್ಲೂಕಿನ ಲಕ್ಕಂದಿನ್ನಿ ಮತ್ತು ಬುದ್ದಿನ್ನಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ₨ 2.25 ಲಕ್ಷಗಳ ಪರಿಹಾರದ ಚೆಕ್‌ಗಳನ್ನು ಗುರುವಾರ ವಿತರಿಸಿದರು.

ಲಕ್ಕಂದಿನ್ನಿ ಗ್ರಾಮದ ಮಾರೆಪ್ಪ ಅವರ ಮನೆಗೆ ಭೇಟಿ ನೀಡಿದ ಅವರು, ಮಾರೆಪ್ಪ ಅವರ ಪತ್ನಿ ಶಿವಮ್ಮ ಮತ್ತು 5 ಹಾಗೂ 2ನೇ ತರಗತಿಯಲ್ಲಿ ಕಲಿಯುವ ಇಬ್ಬರು ಗಂಡು ಮಕ್ಕಳು ಹಾಗೂ ಮಾರೆಪ್ಪ ಅವರ ವೃದ್ಧ ತಾಯಿ ಈರಮ್ಮ ಅವರನ್ನು ಸಂತೈಸಿದರು.

ಬುದ್ದಿನ್ನಿ ಗ್ರಾಮದಲ್ಲಿ ಆಗಸ್ಟ್‌ 13ರಂದು ಆತ್ಮಹತ್ಯೆ ಮಾಡಿಕೊಂಡ ರೈತ ವೆಂಕಟರತ್ನಂ ಅವರ ಕುಟುಂಬಕ್ಕೂ ಮುಖ್ಯಮಂತ್ರಿಗಳು ಪರಿಹಾರದ ಚೆಕ್‌ ಅನ್ನು ಲಕ್ಕಂದಿನ್ನಿಯಲ್ಲೇ ವಿತರಣೆ ಮಾಡಿದರು.

ಕೃಷಿ ಇಲಾಖೆಯಿಂದ ನೀಡಿದ ₨ 2 ಲಕ್ಷ  ಮತ್ತು ಸಾಮಾಜಿಕ ಭದ್ರತಾ ಯೋಜನೆಯಿಂದ ನೀಡಲಾದ ₨ 20 ಸಾವಿರ ಮತ್ತು ಶವಸಂಸ್ಕಾರಕ್ಕೆ ನೀಡುವ ₨ 5 ಸಾವಿರ ಸೇರಿ ₨ 2.25 ಲಕ್ಷ ಪರಿಹಾರದ ನೀಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದ್ದರು.

ಒಂದೂವರೆ ಎಕರೆ ಸ್ವಂತ ಜಮೀನು ಮತ್ತು 20 ಎಕರೆಯನ್ನು ಗುತ್ತಿಗೆ ಪಡೆದು ಭತ್ತ, ಹತ್ತಿ ಬೆಳೆ ಬೆಳೆದಿದ್ದ ಮಾರೆಪ್ಪ ಆಗಸ್ಟ್‌ 14ರಂದು ಕ್ರಿಮಿನಾಶ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು ₨ 3 ಲಕ್ಷ ಸಾಲ ಮಾಡಿದ್ದರು ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಕೆಆರ್‌ಎಸ್‌ ರೈತ ಸಂಘಟನೆಯಿಂದ ₨ 12 ಸಾವಿರ ಮತ್ತು ಸಿರವಾರ ಪತ್ತಿನ ಸಹಕಾರ ಸಂಘದಿಂದ ₨ 10 ಸಾವಿರ ಪರಿಹಾರದ ನೀಡಲಾಗಿದೆ ಎಂದು ಮಾರೆಪ್ಪ ಅವರು ಅಣ್ಣ ಹುನುಮಂತ ತಿಳಿಸಿದರು.

‘ಭೂಸಮೃದ್ಧಿ ಅನುಷ್ಠಾನ’
ರಾಯಚೂರು: ಭೂಮೃವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ ರಾಯಚೂರು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರು ಬೇಸಾಯ ಮಾಡಲು ಮುಂದಾಗಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಗುರುವಾರ ಕೃಷಿ ವಿಶ್ವವಿದ್ಯಾ ಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಭತ್ತದ ಬೆಳೆಗೆ ನೀರು ಪೂರೈಕೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ರೈತರೇ ಭತ್ತ ಬೆಳೆಯುವುದನ್ನು ಈ ಸಾರಿ ಕೈಬಿಡಬೇಕು. ಇಲ್ಲದಿದ್ದರೆ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT