ADVERTISEMENT

ವಸತಿ ನಿಲಯಗಳ ಕಟ್ಟಡಕ್ಕೆ ₹11.40 ಕೋಟಿ: ಶಾಸಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 6:56 IST
Last Updated 8 ಸೆಪ್ಟೆಂಬರ್ 2017, 6:56 IST

ಸಿಂಧನೂರು: ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ವಿದ್ಯಾರ್ಥಿಗಳ ಮೂರು ವಸತಿ ನಿಲಯಗಳ ಕಟ್ಟಡಗಳ ಕಾಮಗಾರಿಗಳಿಗೆ ₹11.40 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ನಗರದ ಕುಷ್ಟಗಿ ರಸ್ತೆಯ ಪಕ್ಕದಲ್ಲಿರುವ ನಿವೇಶನದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ಬಾಲಕಿಯರ ವಿದ್ಯಾರ್ಥಿ ನಿಲಯದ 3.30 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬೀದರ್ ರಾಜಶೇಖರ ಪಾಟೀಲ ಎನ್ನುವ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಒಂದು ವರ್ಷದಲ್ಲಿ ಕಾಮಗಾರಿಯನ್ನು ಮುಗಿಸಬೇಕಾಗಿದೆ. ಹಾಗೆಯೆ ತಾಲ್ಲೂಕಿನ ದಢೇಸೂಗುರು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕೆ ₹ 3.13 ಕೋಟಿ, ನಗರದ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ಕಟ್ಟಡಕ್ಕೆ ₹ 4.80 ಕೋಟಿ ಅನುದಾನ ಸರ್ಕಾರದಿಂದ ಮಂಜೂರಾಗಿದೆ ಎಂದರು.

ADVERTISEMENT

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಟ್ಟಡಕ್ಕೆ ₹10 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗಳನ್ನು ಪ್ರಾರಂಭಿಸ ಲಾಗುವುದು. ನಗರದ ಪ್ರಥಮ ದರ್ಜೆ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮೂಲಸೌಕರ್ಯಗಳಿಗೆ 2 ಕೋಟಿ ಅನುದಾನ ಮಂಜೂರಾಗಿದ್ದು, ಕೂಡಲೇ ಆಡಳಿತ ಮಂಡಳಿಯ ಸಭೆ ಕರೆದು ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗುವುದು ಎಂದರು.

ನಯೋಪ್ರಾದ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಅಲಿ ಜಾಹಗೀರ್‌ದಾರ್‌, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಯಮ್ಮ, ಗುತ್ತಿಗೆದಾರ ರಾಜಶೇಖರ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.