ADVERTISEMENT

ಶ್ರೀಶೈಲ ಭಕ್ತರಿಗೆ ಅನ್ನದಾಸೋಹ, ವೈದ್ಯಕೀಯ ಸೇವೆ

ಭಗವತ್ ಭಕ್ತ ಮಂಡಳಿ, ನರಸಿಂಹರಾಜಪ್ರಭು ಎಜ್ಯುಕೇಷನ್ ಟ್ರಸ್ಟ್‌ನಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:23 IST
Last Updated 20 ಮಾರ್ಚ್ 2018, 11:23 IST

ರಾಯಚೂರು: ಯುಗಾದಿಯ ಅಂಗವಾಗಿ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನ ಪಡೆದು ವಾಪಸ್‌ ಮರಳುತ್ತಿದ್ದ ಭಕ್ತರಿಗಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ಸೇವೆ ಹಾಗೂ ಅನ್ನ ದಾಸೋಹ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ನಡೆಯಿತು.

ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ಭಕ್ತರಿಗೆ ಭಗವತ್ ಭಕ್ತ ಮಂಡಳಿ ಹಾಗೂ ನರಸಿಂಹ ರಾಜಪ್ರಭು ಎಜುಕೇಷನ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ 16ನೇ ವರ್ಷದ ಕಾರ್ಯಕ್ರಮಕ್ಕೆ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅನ್ನಪೂರ್ಣೇಶ್ವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ರಾಜ್ಯದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕಲಬುರ್ಗಿ ಹಾಗೂ ಮಹಾರಾಷ್ಟ್ರದ ವಿವಿಧೆಡೆಗೆ ಮರಳುತ್ತಿದ್ದ ಸಾವಿರಾರು ಭಕ್ತರು ಉಚಿತ ವೈದ್ಯಕೀಯ ಸೇವೆ ಮತ್ತು ಅನ್ನ ದಾಸೋಹದ ಪ್ರಯೋಜನ ಪಡೆದರು.

ADVERTISEMENT

ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಟ್ರಸ್ಟ್‌ ಮುಖ್ಯಸ್ಥ ಸದಾನಂದ ಪ್ರಭು ಹಾಗೂ ಇತರ ಗಣ್ಯರು ಭಕ್ತರಿಗೆ ಪ್ರಸಾದ ಬಡಿಸುವ ಮೂಲಕ ಸೇವೆ ಮಾಡಿದರು. ಭಕ್ತರಿಗೆ ಪಾಯಸ, ಅನ್ನ, ಸಾಂಬಾರು, ಮೊಸರನ್ನ ಹಾಗೂ ಉಪ್ಪಿನಕಾಯಿ ಉಣಬಡಿಸಲಾಯಿತು.

ಬೆಳಿಗ್ಗೆ 7ಗಂಟೆಯಿಂದ ಆರಂಭ ಗೊಂಡ ಅನ್ನದಾಸೋಹ ನಿರಂತರವಾಗಿ ರಾತ್ರಿವರೆಗೂ ನಡೆದಿತ್ತು. ಭಕ್ತರು ತಂಡೋಪ ತಂಡವಾಗಿ ಬಂದು ದಾಸೋಹ ಸ್ವೀಕರಿಸುತ್ತಿದ್ದರು.

ರಿಮ್ಸ್‌, ನವೋದಯ ಹಾಗೂ ಭಂಡಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯಿಂದ ವೈದ್ಯಕೀಯ ಸೇವೆ ನೀಡಲಾಯಿತು. ಭಕ್ತರ ಆರೋಗ್ಯ ತಪಾಸಣೆ, ಚಿಕಿತ್ಸೆ ಮಾಡಲಾಯಿತು.

ನಗರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಟ್ರಸ್ಟ್ ಮುಖ್ಯಸ್ಥ ಸದಾನಂದಪ್ರಭು, ರಾಮಚಂದ್ರ ಪ್ರಭು, ದಾಮೋದರ ಪ್ರಭು, ಸುಧಾಕರ ಪ್ರಭು, ರವೀಂದ್ರ ಪ್ರಭು, ಅಶೋಕ ಪ್ರಭು, ವೆಂಕಟೇಶ ಪ್ರಭು, ನಗರಸಭೆ ಉಪಾಧ್ಯಕ್ಷ ಜಯಣ್ಣ, ಸದಸ್ಯ ಎನ್.ಶ್ರೀನಿವಾಸ ರೆಡ್ಡಿ, ಕೆ.ಶಾಂತಪ್ಪ, ಶಿವಮೂರ್ತಿ, ಸುಭಾಷ್, ರತಿಲಾಲ್, ಭಾಸ್ಕರಶೆಟ್ಟಿ, ಡಿ.ಆರ್.ನಾರಾಯಣ, ವಕೀಲ ಕೆ.ಸಿ.ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.