ADVERTISEMENT

ಹೊಸ ವರ್ಷಾಚರಣೆ: ಚಿಣ್ಣರ ಸಂಭ್ರಮ

ಜಿಲ್ಲೆಯಾದ್ಯಂತ 2017ಕ್ಕೆ ಸಡಗರದ ಸ್ವಾಗತ: ಕೇಕ್‌ ಭರ್ಜರಿ ಮಾರಾಟ, ಚರ್ಚ್‌ಗಳಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:28 IST
Last Updated 2 ಜನವರಿ 2017, 9:28 IST

ರಾಯಚೂರು: ಜಿಲ್ಲೆಯ ವಿವಿಧೆಡೆ ಸಂಘ–ಸಂಸ್ಥೆಗಳು, ಚರ್ಚ್‌ಗಳಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ, ಸಿಹಿ ಹಂಚುವ ಮೂಲಕ ನೂತನ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ರಾಯಚೂರಿನಲ್ಲಿ ಸ್ಟೇಷನ್‌ ರಸ್ತೆಯಲ್ಲಿರುವ ಸೇಂಟ್‌ ಫ್ರಾನ್ಸಿಸ್‌ ಚರ್ಚ್‌ನಲ್ಲಿ ಮೆಥೋಡಿಸ್ಟ್‌ ಚರ್ಚ್‌, ಗಾಸ್ಪೆಲ್‌ ಚರ್ಚ್‌ಗಳಲ್ಲಿ ಶನಿವಾರ ರಾತ್ರಿ ಪ್ರಾರ್ಥನೆಗಳು ನಡೆದರೆ, ಅಗಾಪೆ ಚರ್ಚ್‌ನಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪ್ರಾರ್ಥನಾ ಸಭೆ ನಡೆಯಿತು.

‘ಕಳೆದ ವರ್ಷದ ಒಳಿತುಗಳಿಗಾಗಿ ಭಗವಂತನಿಗೆ ಧನ್ಯವಾದ ಮತ್ತು ಹೊಸ ವರ್ಷದಲ್ಲಿ ಎಲ್ಲರಿಗೂ ಶುಭವಾಗಲೆಂದು ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು’ ಎಂದು ಫ್ರಾನ್ಸಿಸ್‌ ಕ್ಸೇವಿಯರ್‌ ತಿಳಿಸಿದರು.

ದ್ವಿಚ್ರಕವಾಹನಗಳಲ್ಲಿ ಶನಿವಾರ ಮಧ್ಯರಾತ್ರಿವರೆಗೂ ಸಂಚರಿಸಿದ ಯುವಕರು, ಶುಭಾಶಯ ವಿನಿಮಯ ಮಾಡಿಕೊಂಡರು. ಮೊಬೈಲ್‌ನಲ್ಲಿ ಎಸ್‌ಎಂಎಸ್‌, ವಾಟ್ಸ್ ಆ್ಯಪ್‌ ಮೂಲಕ ಶುಭಾಶಯ ವಿನಿಮಯ ನಡೆಯುತ್ತಿತ್ತು. ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ಗುಂಪುಗೂಡಿಕೊಂಡು ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.

ಭಾನುವಾರ ಬೆಳಿಗ್ಗೆ ಅನೇಕರು  ದೇವಾಲಯಗಳಿಗೆ ಭೇಟಿ ಪೂಜೆ ಸಲ್ಲಿಸಿ ಹೊಸ ವರ್ಷದಲ್ಲಿ ಒಳಿತಾಗಲೆಂದು ಪ್ರಾರ್ಥಿಸಿದರು. ಶನಿವಾರ ಸಂಜೆಯಿಂದಲೇ ನಗರದ ಬೇಕರಿಗಳ ಮುಂದೆ ಕೇಕ್‌ ಖರೀದಿಸಲು ಜನರ ಸಾಲು ಇತ್ತು.

ಕೆ.ಜಿ.ಗೆ ₹ 250ರ ದರದಂತೆ ಈ ವರ್ಷ 300 ಕೆ.ಜಿಯಷ್ಟು ಕೇಕ್‌ ಮಾರಾಟ ಮಾಡಿದ್ದೇವೆ. ಸೇಬು, ಕಿತ್ತಲೆ, ಪೈನಾಪಲ್‌, ಚಾಕೊಲೆಟ್‌ ಸ್ವಾದದ ಕೇಕ್‌ಗಳು ಹೆಚ್ಚಾಗಿ ಬಿಕರಿಯಾಗಿವೆ’ ಎಂದು ಬಸವನಬಾವಿ ವೃತ್ತದಲ್ಲಿರುವ ವೆಂಕಟೇಶ್ವರ ಬೇಕರಿಯ ಮಾಲೀಕ ರವಿರಾಜ ಹೇಳಿದರು. ಹಲವೆಡೆ ವಿಭಿನ್ನ ರೀತಿಯಲ್ಲಿ ಹೊಸ ವರ್ಷಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.