ADVERTISEMENT

100 ವಾರ ಪೂರೈಸಿದ ಯುವಕರ ಸ್ವಚ್ಛ ಅಭಿಯಾನ

ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿ

ಶಶಿಧರ ಗರ್ಗಶ್ವೇರಿ
Published 23 ಜನವರಿ 2017, 9:44 IST
Last Updated 23 ಜನವರಿ 2017, 9:44 IST
100 ವಾರ ಪೂರೈಸಿದ ಯುವಕರ ಸ್ವಚ್ಛ ಅಭಿಯಾನ
100 ವಾರ ಪೂರೈಸಿದ ಯುವಕರ ಸ್ವಚ್ಛ ಅಭಿಯಾನ   

ರಾಯಚೂರು: ಸಮಾನ ಮನಸ್ಕ ಯುವಕರು ಸೇರಿಕೊಂಡು 12 ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ವೀರ ಸಾವರ್ಕರ್‌ ಯೂಥ್‌ ಅಸೋಸಿಯೇಷನ್‌ ಎರಡು ವರ್ಷಗಳಿಂದ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ‘ಸ್ವಚ್ಛ ಭಾರತ, ಸ್ವಚ್ಛ ರಾಯಚೂರು’ ಎಂಬ ಆಂದೋಲನವನ್ನು ನಗರದಲ್ಲಿ ಸದ್ದಿಲ್ಲದೆ ಮಾಡುತ್ತಿದೆ. ಈ ಸೇವಾ ಕಾರ್ಯವು ಜ. 15ಕ್ಕೆ 100 ವಾರಗಳನ್ನು ಪೂರೈಸಿದೆ.

ಪ್ರತಿ ಭಾನುವಾರ ಸಂಜೆ 4ರಿಂದ 6 ಅಥವಾ 5ರಿಂದ 7 ಗಂಟೆವರೆಗೆ ನಗರದ ವಿವಿಧೆಡೆ ಈ ಅಸೋಸಿಯೇಷನ್‌ ಸದಸ್ಯರು ಪೊರಕೆ, ಗುದ್ದಲಿ, ಬಾಣಲೆ ಹಿಡಿದು ಕಸ ತೆಗೆಯುವ, ಕಟ್ಟಿಕೊಂಡ ಚರಂಡಿ ಸ್ವಚ್ಛ ಮಾಡುವ, ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಯಾವ ಮುಜುಗರವೂ ಇಲ್ಲದೆ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಸ್ವಚ್ಛತೆ ಕಾಪಾಡುವಂತೆ ಗೋಡೆ ಬರಹ, ಚಿತ್ರಗಳ ಮೂಲಕ ಮತ್ತು ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕೆಲಸವನ್ನು ಅಸೋಸಿಯೇಷನ್‌ ಸದಸ್ಯರು ಮಾಡಿದ್ದಾರೆ.

ನಗರದ ಐತಿಹಾಸಿಕ ಕೋಟೆ, ಬಸ್‌ ನಿಲ್ದಾಣದ ಹಿಂಭಾಗ ಇರುವ ಗುಬ್ಬೇರು ಬೆಟ್ಟ, ಶಾಲಾ– ಕಾಲೇಜು ಆವರಣ ಮುಂತಾದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಜವಾಹರ ನಗರದ ರಾಘವೇಂದ್ರ ಮಠದ ಬಳಿ ಇರುವ ಎರಡು ಬಾವಿಗಳು, ನಗರದ ಐತಿಹಾಸಿಕ ಖಾಸ ಬಾವಿ, ಮಾವಿನಕೆರೆ ಸುತ್ತಮುತ್ತ ಈ ಅಸೋಸಿಯೇಷನ್‌ ಸದಸ್ಯರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಈ ಅಸೋಸಿಯೇಷನ್‌ನಲ್ಲಿ ಶಿಕ್ಷಕರು, ಎಂಜಿನಿಯರ್‌ಗಳು, ವ್ಯಾಪಾರಸ್ಥರು ಮತ್ತು ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಇದ್ದು, ಸುಮಾರು ಒಂದು ಸಾವಿರ ಸದಸ್ಯರಿದ್ದಾರೆ. ಪ್ರತಿವಾರ ಕನಿಷ್ಠ 50ರಿಂದ 60 ಮಂದಿ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತಾರೆ.

‘ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ ನಂತರ ನಮ್ಮ ಅಸೋಸಿಯೇಷನ್‌ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಾ ಬಂದಿದೆ. ಮೊದಮೊದಲು ಸ್ವಚ್ಛತೆಗೆ ಹೋದಾಗ ಜನರು ಅನುಮಾನದಿಂದ ನೋಡುತ್ತಿದ್ದರು. ಮೊಬೈಲ್‌ಗಳಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದರು. ನಂತರ ದಿನಗಳಲ್ಲಿ ನಮ್ಮ ಕಾರ್ಯಕ್ಕೆ ನಾಗರಿಕರೂ, ಹಿರಿಯ ನಾಗರಿಕರು ಹೆಚ್ಚಾಗಿ ಕೈಜೋಡಿಸಿದರು’ ಎಂದು ಅಸೋಸಿಯೇಷನ್‌ ಅಧ್ಯಕ್ಷ ಎನ್‌.ಗೋವಿಂದ ರಾಜ್‌ ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.