ADVERTISEMENT

ಅಕ್ರಮಕ್ಕೆ ಕಡಿವಾಣ ಎಚ್ಚರಿಕೆ: ಹಿಂದಿನ ಪ್ರಕರಣಗಳ ತನಿಖೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 8:48 IST
Last Updated 15 ಮಾರ್ಚ್ 2017, 8:48 IST

ರಾಮನಗರ: ‘ನಿಯಮ ಉಲ್ಲಂಘಿಸಿ ರಚನೆಯಾಗಿರುವ ಅಕ್ರಮ ಬಡಾವಣೆಗಳಲ್ಲಿನ ನಿವೇಶನಗಳ ಮಾರಾಟಕ್ಕೆ ತಡೆ ಒಡ್ಡಲಾಗುವುದು. ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯಹಾರಗಳ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಿಎನ್‍ಆರ್ ವೆಂಕಟೇಶ್ ಹೇಳಿದರು.

‘ಪ್ರಾಧಿಕಾರದಲ್ಲಿನ ಸದ್ಯದ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. 2005ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ 1,200 ನಿವೇಶನಗಳು ಇದ್ದು, ಇಂದು ಅವುಗಳನ್ನು ಮಾರಾಟ ಮಾಡಲಾಗಿದೆ. ಇದರಿಂದ ಬಂದ ಕೋಟ್ಯಂತರ ರೂಪಾಯಿ ಮಂಡ್ಯ ಜಿಲ್ಲೆಗೆ ರವಾನೆಯಾಗಿದೆ. ಈ ಬಗ್ಗೆ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಗರ ನಿರ್ಮಾಣ ಕಾಯ್ದೆಯನ್ನು ಉಲ್ಲಂಘಿಸಿ ರಚನೆಯಾಗಿರುವ ಬಡಾವಣೆಗಳ ವಿರುದ್ಧ ಕ್ರಮ ನಿಶ್ಚಿತ, ಮುಂದೆ ಇಂತಹ ಬಡಾವಣೆಗಳಿಗೆ ಅನುಮತಿ ನೀಡುವುದಿಲ್ಲ’ ಎಂದರು. ಕೇವಲ ಒಂದು ವರ್ಷದ ಅಧಿಕಾರದ ಅವಧಿ ದೊರೆತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ವಸತಿ ಬಡಾವಣೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ADVERTISEMENT

20 ವರ್ಷಗಳಿಂದ ಕಾಂಗ್ರೆಸ್‌ ಕಾರ್ಯಕರ್ತನಾಗಿ ದುಡಿದ ಪ್ರತಿಫಲವಾಗಿ ಈ ಹುದ್ದೆ ದೊರೆತಿದ್ದು, ಇದಕ್ಕೆ ಕಾರಣರಾದ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್‌ ಹಾಗೂ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ನಗರಸಭೆ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಅಕ್ರಮ ಬಡಾವಣೆಗಳ ನಿಯಂತ್ರಣ ಹಾಗೂ ಸಕ್ರಮ ಬಡಾವಣೆಗಳಲ್ಲಿನ ಮೂಲ ಸೌಕರ್ಯ ವಿಸ್ತರಣೆಗೆ ಪ್ರಾಧಿಕಾರದ ಜೊತೆ ಸಹಕರಿಸುವುದಾಗಿ ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಸಮೀನಾ ತಾಜ್‌, ಸದಸ್ಯರಾದ ಎಚ್‌.ಎಸ್. ಲೋಹಿತ್‌, ಮುತ್ತುರಾಜ್, ತಲ್ಹಾ ಪಾಷಾ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಮ್ಮ ಮತ್ತಿತರರು ಇದ್ದರು.

***

ಪ್ರಾಧಿಕಾರ ಇಬ್ಬಾಗ
ಅವಳಿ ನಗರ ಅಭಿವೃದ್ಧಿಯ ಕನಸು ಹೊತ್ತು ರಚನೆಯಾಗಿದ್ದ ರಾಮನಗರ–ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವನ್ನು ವಿಭಜನೆ ಮಾಡಲಾಗಿದೆ. ಇನ್ನು ಮುಂದೆ ಎರಡೂ ನಗರಗಳಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಪ್ರಾಧಿಕಾರಗಳು ಕಾರ್ಯ ನಿರ್ವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.