ADVERTISEMENT

ಅರವಟಿಗೆ ಕಟ್ಟಡಕ್ಕೆ ಸಹಾಯ ನೀಡಿ

ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:21 IST
Last Updated 25 ಮಾರ್ಚ್ 2017, 8:21 IST

ಮಾಗಡಿ: ಪುರಾಣ ಪ್ರಸಿದ್ಧ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ದೇವಾಲಯದ ಬಳಿ ನಿರ್ಮಾಣ ಹಂತದಲ್ಲಿ ಇರುವ ರಂಗನಾಥ ಸ್ವಾಮಿ ಒಕ್ಕಲಿಗೆ ಅರವಟಿಗೆ ಕಟ್ಟಡ ಪೂರ್ಣಗೊಳಿಸಲು ನಾಡಿನ ಒಕ್ಕಲಿಗ ಮತ್ತು ಇತರೆ ಸಮುದಾಯಗಳ ಎಲ್ಲಾ ಭಕ್ತರು ಉದಾರ ಸಹಾಯ ನೀಡಿ, ಕೆಂಪೇಗೌಡ ಪರಂಪರೆ ಮುಂದುವರೆಯಲು ಸಹಕರಿಸಬೇಕು ಎಂದು ಶಿರಾ ತಾಲ್ಲೂಕು ಪಟ್ಟನಾಯಕನ ಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಾಧೀಶ ನಂಜಾವಧೂತ ಸ್ವಾಮಿ ತಿಳಿಸಿದರು.

ತಿರುಮಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಂಗನಾಥ ಸ್ವಾಮಿ ಒಕ್ಕಲಿಗರ ಅರವಟಿಗೆಗೆ  ಶುಕ್ರವಾರ ಭೇಟಿ ನೀಡಿ ಕಟ್ಟಡದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಇಲ್ಲಿನ ಅರವಟಿಗೆ ಕೆಂಪೇಗೌಡರ ಆಡಳಿತಾವಧಿಯಲ್ಲಿದ್ದ  ನಾಡಿನ ಗತವೈಭವವನ್ನು ನೆನಪಿಗೆ ತರುವಂತಿದೆ. ಕೆಂಪೇಗೌಡರ ಸ್ಮಾರಕ ಭವನದಂತಹ ಭವ್ಯ ಕಟ್ಟಡ ಇಲ್ಲಿ ನಿರ್ಮಾಣವಾಗುತ್ತಿದೆ, ಪ್ರತಿಯೊಬ್ಬರು ಕೈಲಾದ ಸಹಾಯ ನೀಡಬೇಕು.

ರಂಗನಾಥ ಸ್ವಾಮಿ ಜಾತ್ರೆಯ ಸಮಯದಲ್ಲಿ ನಾಡಿನ ಮೂಲೆಮೂಲೆಗಳಿಂದ ಮಾಗಡಿಗೆ ಬರುವ ಭಕ್ತರು ಉಳಿದುಕೊಂಡು ಜಾತ್ರೆಯ ವೈಭವವನ್ನು ಕಣ್ತುಂಬಿಸಿಕೊಳ್ಳಲು ಅರವಟಿಗೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸ್ವಾಮೀಜಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ಮಾತನಾಡಿ ₹5 ಕೋಟಿ ವೆಚ್ಚದಲ್ಲಿ ಅರವಟಿಗೆ ಕಟ್ಟಡ ನಿರ್ಮಾಣವಾಗುತ್ತಿದೆ. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ  ಮುಖ್ಯಮಂತ್ರಿ ನಿಧಿಯಿಂದ ₹50 ಲಕ್ಷ ಅನುದಾನ ಕೊಡಿಸುವುದಾಗಿಯೂ ಮತ್ತು ವೈಯುಕ್ತಿಕ ಸಹಾಯಧನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ, ಕಟ್ಟಡ ಪೂರ್ಣವಾಗುವವರೆಗೆ ಕಟ್ಟಡ ಕಾರ್ಮಿಕರಿಗೆ ತಗಲುವ ವೆಚ್ಚವನ್ನು  ಶಾಸಕ ಎಚ್‌.ಸಿ.ಬಾಲಕೃಷ ನೀಡುತ್ತಿದ್ದಾರೆ.

ಸಮಾಜ ಸೇವಕ ಕೆ.ಬಾಗೇಗೌಡರು ಧನಸಹಾಯ ಮಾಡಿದ್ದು, ಗ್ರಾನೈಟ್‌ ಕೊಡಿಸುವುದಾಗಿ ತಿಳಿಸಿದ್ದಾರೆ. ನೇತೇನ ಹಳ್ಳಿ ತಿಮ್ಮೇಗೌಡ ಸಿಮೆಂಟ್‌ ಕೊಡಿಸುತ್ತಿದ್ದಾರೆ. ಬಾಲಾಜಿ ರಂಗನಾಥ್‌ ಕಬ್ಬಿಣ ನೀಡಿದ್ದಾರೆ, ಜುಟ್ಟನಹಳ್ಳಿ ಚಂದ್ರೇಗೌಡ ಕಿಟಕಿ ಬಾಗಿಲು ಕೊಡಿಸಿದ್ದಾರೆ ಎಂದರು.

ಜಾತ್ರೆಯ ಸಮಯದಲ್ಲಿ ಏಕಕಾಲಕ್ಕೆ ಸಾವಿರ ಜನರು ಕುಳಿತು ಊಟ ಮಾಡುವ 180 X 80 ಅಡಿ ವಿಸ್ತೀರ್ಣದ  ಭೋಜನ ಶಾಲೆ, ಕೊಠಡಿಗಳು ಇತರೆ ಸೌಲಭ್ಯ ಇರುತ್ತದೆ ಎಂದು ಕಟ್ಟಡ ನಿರ್ಮಾಣದ ಉಸ್ತುವಾಗಿ ನೋಡಿಕೊಳ್ಳುತ್ತಿರುವ ನಿವೃತ್ತ ನೌಕರ ಗಂಗಾಧರಪ್ಪ ತಿಳಿಸಿದರು. ಪುರಸಭೆಯ ಮಾಜಿ ಅಧ್ಯಕ್ಷ ಪುರುಷೋತ್ತಮ್‌, ಅರವಟಿಗೆ ಟ್ರಸ್ಟಿನ ಖಜಾಂಚಿ ಎಂ.ಕೆ.ಶಿವಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT