ADVERTISEMENT

ಕನ್ನಡಿಗರ ಅವಹೇಳನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:13 IST
Last Updated 10 ಏಪ್ರಿಲ್ 2017, 6:13 IST
ಕನಕಪುರ ನಗರದ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಬಳಿ ತಮಿಳು ನಟ ಸತ್ಯರಾಜ್‌ ವಿರುದ್ದ ಪ್ರತಿಭಟನೆ ನಡೆಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಸ್‌.ಭಾಸ್ಕರ್‌, ತಾಲ್ಲೂಕು ಅಧ್ಯಕ್ಷ ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು
ಕನಕಪುರ ನಗರದ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಬಳಿ ತಮಿಳು ನಟ ಸತ್ಯರಾಜ್‌ ವಿರುದ್ದ ಪ್ರತಿಭಟನೆ ನಡೆಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಸ್‌.ಭಾಸ್ಕರ್‌, ತಾಲ್ಲೂಕು ಅಧ್ಯಕ್ಷ ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು   

ಕನಕಪುರ: ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವ ಸತ್ಯರಾಜ್‌ ನಟನೆಯ ಬಾಹುಬಲಿ–2 ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್‌.ಭಾಸ್ಕರ್‌ ಆಗ್ರಹಿಸಿದರು.

ನಗರದ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಬಳಿ ತಮಿಳು ನಟ ಸತ್ಯರಾಜ್‌ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸಂಘಟನೆ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

‘ಕನ್ನಡಿಗರು ವಿಶಾಲ ಮನೋಭಾವದವರು. ಬೇರೆಯವರ ವಿಚಾರಕ್ಕೆ, ತಂಟೆಗೆ ಹೋಗುವುದಿಲ್ಲ. ಆದರೂ ತಮಿಳಿಗರು ನಮ್ಮ ಮೇಲೆ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುತ್ತಾರೆ.

ತಮಿಳು ನಟ ಸತ್ಯರಾಜ್‌ ಹಿರಿಯ ಹೋರಾಟಗಾರ ವಾಟಾಳ್‌ ನಾಗರಾಜು ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ನಾಯಿ ನರಿಗಳಿಗೆ ಹೋಲಿಕೆ ಮಾಡಿರುವುದು ಅತ್ಯಂತ ಖಂಡನೀಯ’ ಎಂದು ಕಿಡಿಕಾರಿದರು.

‘ಕನ್ನಡಪರ ಹೋರಾಟಗಾರರನ್ನು ಅವಮಾನಿಸಿರುವ ಹಾಗೂ ಕಾವೇರಿ ಮಾತೆಯನ್ನು ಕೀಳು ಭಾವನೆಯಿಂದ ನೋಡಿರುವ ಸತ್ಯರಾಜ್‌ ನಟಸಿರುವ ಯಾವುದೇ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು’ ಎಂದು ಒತ್ತಾಯಿಸಿದರು.

ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ನಾಗರಾಜು, ಅಲ್ಪ ಸಂಖ್ಯಾ ಘಟಕದ ಅಧ್ಯಕ್ಷ ಜಾವಿದ್, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಅಸ್ಗರ್‌, ಟೌನ್‌ ಕಾರ್ಯಾಧ್ಯಕ್ಷ ಮನಗಣಚಾರ್‌, ಕಾರ್ಯದರ್ಶಿ ನಂಜುಂಡಯ್ಯ, ಗೌರವಾಧ್ಯಕ್ಷ ಶಶಿಭೂಷಣ್, ಅಲ್ಪಸಂಖ್ಯಾತ ಘಟಕದ ಗೌರವಾದ್ಯಕ್ಷ ಅಮೀರ್ ಜಾನ್, ಮುಖಂಡ ಕುಮಾರ್‌ ಮತ್ತಿತರರು ಉಸ್ಥಿತರಿದ್ದರು.

*
ಸತ್ಯರಾಜ್‌ ತಮ್ಮ ಭಾಷೆಯನ್ನು ಓಲೈಸಲು ಕನ್ನಡ ಭಾಷಿಕರು ಮತ್ತು ಹೋರಾಟಗಾರರ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ. ಸತ್ಯರಾಜ್‌ ಕನ್ನಡಿಗರ ಕ್ಷಮೆ ಯಾಚಿಸಬೇಕು.
-ಕೂ.ಗಿ.ಗಿರಿಯಪ್ಪ, ಅಧ್ಯಕ್ಷ, ಜಿಲ್ಲಾ ಲೇಖಕರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT