ADVERTISEMENT

ಕಾವ್ಯ ಕೃತಿಯಲ್ಲಿ ಮಿಡಿದ ಯುವಕರ ದನಿ

ಶಾಂತಲ ಚಾರಿಟಬಲ್‌ ಟ್ರಸ್ಟ್‌ ಆಯೋಜಿಸಿದ್ದ ಅಂತರರಾಜ್ಯ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 8:19 IST
Last Updated 28 ಏಪ್ರಿಲ್ 2015, 8:19 IST

ರಾಮನಗರ :  ಆಧುನಿಕತೆಯ ಜಂಜಾಟಗಳ ನಡುವೆ ಏಕಾಂತವನ್ನು ಕಂಡುಕೊಳ್ಳುವ ಅಗತ್ಯವಿದ್ದು, ಇಂದಿನ ಕವಿ ಮನೋಧರ್ಮಕ್ಕೆ ಸವಾಲಾಗಿದೆ ಎಂದು ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್ ಹೇಳಿದರು.

ನಗರದ ಯೂನಿವರ್ಸಲ್ ಪಬ್ಲಿಕ್ ಶಾಲೆಯಲ್ಲಿ ಶಾಂತಲ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಶಾಂತಲ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದಲ್ಲಿ ಸೋಮವಾರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿತೆಗೆ ಪರಂಪರೆಯ ಜವಾಬ್ದಾರಿ ಇದೆ. ಜಗತ್ತಿನ ಸಕಲ ವಸ್ತುಗಳು ಕವಿತೆಯ ನೆಲೆಗಳಾಗಿವೆ. ಕವಿತೆಯು ಒಂದು ರೀತಿಯ ಹದ ನೀರಿಕ್ಷಿಸುತ್ತದೆ. ಪ್ರತಿ ಕವಿಯು ತನ್ನದೇ ಆದ ಒಂದು ಹದವನ್ನು ಹುಡುಕಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇಂದು ನೂರಾರು ಆಕರ್ಷಣೆಗಳ ನಡುವೆ ಬದುಕುತ್ತಿದ್ದೇವೆ. ಸೃಜನಶೀಲತೆಯ ಒಡನಾಡಗಳೊಂದಿಗೆ ಸಾಹಿತ್ಯ ಕೃಷಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಒಂದು ಕಾಲದ ಅಂತಃ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.

ತಾಂತ್ರಿಕ ಯುಗದಲ್ಲಿ ಯುವಬರಹಗಾರರು ಕಾವ್ಯದ ಸೆಲೆ ಜೀವಂತವಾಗಿಟ್ಟುಕೊಂಡಿರುವುದು ಉತ್ತಮ ಬೆಳವಣಿಗೆ. ಯುವ ಕವಿಗಳು ಕೀಳರಿಮೆ ತೊರೆದು ಕಾವ್ಯ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕವಿಗಳಾದ ಕಲ್ಪನಾಶಿವಣ್ಣ, ಎಲ್ಲೇಗೌಡ ಬೆಸಗರಹಳ್ಳಿ, ಜಯರಾಮಯ್ಯ, ಹನಿಯೂರುಚಂದ್ರೇಗೌಡ, ಯಶೋಧ ಸಿದ್ದಣ್ಣಯ್ಯ, ಡಾ. ಅಂಕನಹಳ್ಳಿಪಾರ್ಥ, ಬಿ.ಆರ್.ಶಿವಕುಮಾರ್, ರಾಣಿಕಿರಣ್, ಜಿ. ಸತೀಶ್, ಹೊಸದೊಡ್ಡಿ ಸಿ.ರಮೇಶ್ ಕವಿತೆಗಳನ್ನು ವಾಚಿಸಿದರು.
ಶಾಂತಲಾ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ನಾಗೇಂದ್ರರಾವ್, ಕಾರ್ಯದಶರ್ಿ ಕವಿತಾರಾವ್, ಎಸ್‌ಬಿಎಂ ಲೋಕೇಶ್ ಇತರರು ಉಪಸ್ಥಿತರಿದ್ದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ  ಯುವ ಬರಹಗಾರರು ಕಾವ್ಯದ ಸೆಲೆ ಜೀವಂತವಾಗಿಟ್ಟುಕೊಂಡಿರುವುದು ಉತ್ತಮ ಬೆಳವಣಿಗೆ
ಡಾ. ಕುರುವ ಬಸವರಾಜ್‌,
ಜಾನಪದ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.