ADVERTISEMENT

ಕೌರವರು– ಪಾಂಡವರ ಯುದ್ಧ ಇದ್ದಂತೆ

ಕುದುರು ಕ್ಷೇತ್ರ– ಜಮೀರ್ ಅಹಮದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 10:24 IST
Last Updated 8 ಫೆಬ್ರುವರಿ 2016, 10:24 IST
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಶಾಸಕ ಜಮೀರ್‌ ಅಹಮದ್‌ ಮಾತನಾಡಿದರು
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಶಾಸಕ ಜಮೀರ್‌ ಅಹಮದ್‌ ಮಾತನಾಡಿದರು   

ಮಾಗಡಿ: ಜೆಡಿಎಸ್‌ ಪಕ್ಷದ ಶಾಸಕನಾಗಿ ನಾನು ಆನೇಕಲ್‌ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿಲ್ಲ ಎಂದು ಶಾಸಕ ಜಮೀರ್‌ ಅಹಮದ್‌ ನುಡಿದರು. ತಾಲ್ಲೂಕಿನ ಕುದೂರಿನಲ್ಲಿ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನನ್ನ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದವನು ಖರೀದಿಸಿದ್ದ ನಿವೇಶನವನ್ನು ಮಸೀದಿ ಕಮಿಟಿಗೆ ಕೊಡಿಸಲು ಹೋಗಿದ್ದೆ. ಅದೆ ಸಮಯದಲ್ಲಿ ಆಕಸ್ಮಿಕವಾಗಿ ಕಾಂಗ್ರೆಸ್ ಅಭ್ಯರ್ಥಿ ಬಾಬುರೆಡ್ಡಿ  ಎದುರಿಗೆ ಬಂದು ಮಾತನಾಡಿದರು. ಕೆಲವರು ಫೋಟೋ ತೆಗೆದರು. ಅವರೇ ವಿವಾದ ಸೃಷ್ಟಿ ಮಾಡಿದ್ದಾರೆಂದು ಜೆಡಿಎಸ್ ಶಾಸಕ ಜಮೀರ್ ಆಹ್ಮದ್ ತಿಳಿಸಿದರು.

ನಾನು ಪಠಾಣ್ಗೆ ಬಚ್ಛಾ, ಬಾಬ್ರಿ ಮಸೀದಿ ಧ್ವಂಸ ಮಾಡಿದರೂ ಸುಮ್ಮನಿದ್ದ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ನಾನೇನು  ಹುಚ್ಚನೇ? ನಾನು ಜೆಡಿಎಸ್ ಪಕ್ಷದಲ್ಲಿ ಕೊನೆಯವರೆಗೂ ಇರುತ್ತೇನೆ. ಇದು ದೇವೇಗೌಡ ಮತ್ತು ನಾವು ಕಟ್ಟಿದ ಪಕ್ಷ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲವೆಂದು ಜಮೀರ್ ಅಹಮದ್‌ ವಿವರಿಸಿದರು.

ಎ.ಮಂಜುನಾಥ  ಜಿ. ಪಂ. ಅಭ್ಯರ್ಥಿಯಾಗದಿದ್ದರೆ ತಾ.ಪಂ ಕ್ಷೇತ್ರಗಳಿಗೆ ನಾವ್ಯಾರು ಅಭ್ಯರ್ಥಿ ಗಳಾಗುವುದಿಲ್ಲವೆಂದು ಕುದೂರಿನ ಕಾಂಗ್ರೆಸ್ ಮುಖಂಡರು ಹೇಳಿದ್ದರಂತೆ. ಹಾಗಾದರೆ ಕುದೂರಿನಲ್ಲಿ ಜೆಡಿಎಸ್ ವಿರುದ್ಧ ಸ್ಪರ್ದೆ ಮಾಡುವಂತಹ ಗಂಡಸರು ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲವಾ ? ಎಂದು ಕಾಂಗ್ರೆಸ್ಸಿಗರ ವಿರುದ್ದ ಶಾಸಕ ಬಾಲಕೃಷ್ಣ ಟೀಕಿಸಿದರು.

ಕುದೂರು ಕ್ಷೇತ್ರದಲ್ಲಿ ಕಾಂಗ್ರೆಸ್  ಅವರೆಲ್ಲ ಕೌರವರಾದರೆ ನಾವು ಪಾಂಡವರಾಗಿದ್ದೇವೆ. ಇಲ್ಲಿ ಕೌರವ ಪಾಂಡವರ ನಡುವೆ ಯುದ್ದ ನಡೆಯುತ್ತಿದೆ. ಕೊನೆಗೆ ಧರ್ಮಯುದ್ದದಲ್ಲಿ ಪಾಂಡವರಿಗೆ ಜಯ ದೊರಕಿದಂತೆ ಜೆಡಿಎಸ್ ಗೆ  ಜಯ ದೊರಕುವುದರಲ್ಲಿ ಅನುಮಾನವೇ ಇಲ್ಲವೆಂದು ಶಾಸಕ ಬಾಲಕೃಷ್ಣ ವಿಶ್ವಾಸದಿಂದ ಮಾತನಾಡಿದರು.

ಮಾವಿನಗಿಡಕ್ಕೆ ನೀರು ಹಾಕಿದರೆ ಒಳ್ಳೆ ಫಸಲು ನೀಡುತ್ತದೆ. ಅಣ್ಣೇಗೌಡ ಮಾವಿನ ಗಿಡ ಇದ್ದಂತೆ ಆದ್ದರಿಂದ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಶಾಸಕರು ವರ್ಣಿಸಿದರು. ಗ್ರಾ.ಪಂ.ಸದಸ್ಯ ಜಾವೇದ್  ಜೆಡಿಎಸ್‌ಗೆ ಸೇರ್ಪಡೆಗೊಂಡರು. ಜಿ.ಪಂ.ಅಭ್ಯರ್ಥಿ ಅಣ್ಣೇಗೌಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.