ADVERTISEMENT

ಜನರಿಗೆ ಎಲ್ಲ ಮೂಲಸೌಕರ್ಯ:ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:24 IST
Last Updated 24 ಡಿಸೆಂಬರ್ 2017, 5:24 IST
ಕೋಡಿಹಳ್ಳಿ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ಮಾಡಿದರು
ಕೋಡಿಹಳ್ಳಿ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ಮಾಡಿದರು   

ಕನಕಪುರ: ಕನಕಪುರದ ಬಸ್ ನಿಲ್ದಾಣದಂತೆಯೇ ಕೋಡಿಹಳ್ಳಿಯಲ್ಲಿಯೂ ಅತ್ಯುತ್ತಮ ದರ್ಜೆ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಪ್ರಯಾಣಿಕರಿಗೆ ಸಕಲ ರೀತಿಯ ಮೂಲಸೌಕರ್ಯ ಒದಗಿಸಿ ಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿನ ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸರ್ಕಾರಿ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೋಡಿಹಳ್ಳಿಯಲ್ಲಿ ಉತ್ತಮ ದರ್ಜೆಯ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಇದು ಸುಸಜ್ಜಿತವಾಗಿದೆ. ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಇದು ಉಪಯುಕ್ತವಾಗಿದೆ, ಅದರ ಅನುಕೂಲ ಪಡೆದುಕೊಳ್ಳಬೇಕು ಎಂದರು.

ADVERTISEMENT

‘94-ಸಿ ಅಡಿ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಪಹಣಿಗಳಲ್ಲಿನ ಸಮಸ್ಯೆ ಬಗೆಹರಿಸಲು ಕಂದಾಯ ಇಲಾಖೆ ಅಧಿಕಾರಿಗಳೆ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇವರು ಬಂದ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ನಮೂನೆ-50 ಮತ್ತು 53ರಡಿ ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿಯ 1196 ಫಲಾನುಭವಿಗಳಿಗೆ 1591-23 ಎಕರೆ ಜಮೀನಿಗೆ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ. 94-ಸಿ ರಡಿ ಕೋಡಿಹಳ್ಳಿ ಹೋಬಳಿಯ 4 ಫಲಾನುಭವಿಗಳಿಗೆ 885 ಚ.ಮೀ. ವಿಸ್ತೀರ್ಣಕ್ಕೆ ನಿವೇಶನ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕಿನಾದ್ಯಂತ 92 ಸಾವಿರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಂತರ್ಜಾಲದ ಮೂಲಕ ವಿತರಿಸಲಾಗುತ್ತಿದೆ. ಇಂದು 201 ಪ್ರಕರಣಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ವಿತರಿಸಲಾಗುತ್ತಿದೆ. ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿ 791 ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಡಿ 221 ಜನರಿಗೆ 344 ಎಕರೆ ಜಮೀನಿಗೆ ಹಕ್ಕು ಪತ್ರ. ತಾಲ್ಲೂಕಿನ 43 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದ್ದು, 7,917 ಖಾತೆದಾರರಿಗೆ ಉಚಿತ ಪಹಣಿ ವಿತರಿಸಲಾಗುತ್ತಿದೆ ಎಂದರು.

ಸಾಮೂಹಿಕ ಹಾಗೂ ವೈಯುಕ್ತಿಕ ಕಾಮಗಾರಿ ಕೈಗೊಳ್ಳಬಹುದಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ₨5ಕೋಟಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ 1,45,000 ವೈಯುಕ್ತಿಕ ಕಾಮಗಾರಿ, 8,600 ಸಮುದಾಯ ಕಾಮಗಾರಿ ಕೈಗೊಳ್ಳಲಾಗಿದೆ, ಅಂರ್ತಜಲ ಹೆಚ್ಚಿಸಲು 1500 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ, 45 ಸಾವಿರ ದನದ ಕೊಟ್ಟಿಗೆ ನಿರ್ಮಿಸುವ ಮೂಲಕ ದಾಖಲೆ ಮಾಡಲಾಗಿದೆ ಎಂದರು.

ಅರ್ಕಾವತಿ ಜಲಾಯಶ ಯೋಜನೆ ಮೂಲಕ ಕೆರೆ ತುಂಬಿಸಿ ಆ ಮೂಲಕ 15,400 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯುತ್ ಸಮಸ್ಯೆ ಬಾರದಿರಲಿ ಎಂದು ಎಚ್.ವಿ.ಡಿ.ಎಸ್ ಯೋಜನೆ ಈ ಭಾಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಸೋಲಾರ್ ಮೂಲಕ ವಿದ್ಯುತ್ ಸಂಗ್ರಹಿಸುವ ಸೂರ್ಯ ರೈತ ಯೋಜನೆಯನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿಯೂ ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ತುಮಕೂರಿನ ಪಾವಗಡದಲ್ಲಿ ಈಗ 600 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮುಂದಿನ ವರ್ಷ ಅದನ್ನು ಒಂದು ಸಾವಿರ ಮೆಗಾವಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.

ಸಚಿವರಾದ ಎಚ್.ಎಂ. ರೇವಣ್ಣ, ರಾಮಲಿಂಗಾ ರೆಡ್ಡಿ, ಸಂಸದ ಡಿ.ಕೆ. ಸುರೇಶ್‌ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಎಸ್‌. ರವಿ, ಜಿಲ್ಲಾಧಿಕಾರಿ ಬಿ.ಆರ್. ಮಮತಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಸದಸ್ಯರಾದ ಶಿವಕುಮಾರ್, ಜಯರತ್ನ, ಎಂ.ಎನ್. ನಾಗರಾಜ್, ಎಚ್. ಬಸಪ್ಪ, ಉಷಾರವಿ, ಭಾಗ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಗೀತಾಈಶ್ವರ್‌, ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಚಿಂದಾರಿಗೌಡ ಇದ್ದರು.

ಸಿಎಂ ಭೇಟಿ

ಮುಂಬರುವ ಜನವರಿ 13ರಂದು ಮುಖ್ಯಮಂತ್ರಿಯವರು ಕನಕಪುರ ತಾಲ್ಲೂಕಿಗೆ ಬಂದು ಹಲವಾರು ನೂತನ ಸರ್ಕಾರಿ ಕಟ್ಟಡಗಳನ್ನು ಲೋಕಾರ್ಪಣೆ ಮಾಡುವರು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಜಿಲ್ಲೆಯಲ್ಲಿ 16 ಸಾವಿರ ಚಾಲನಾ ಪರವಾನಗಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.