ADVERTISEMENT

ಜನರ ಉದಾರತೆಗೆ ಸಂಸದ ಮೆಚ್ಚುಗೆ

ರಸ್ತೆ ವಿಸ್ತರಣೆಗೆ ಜಾಗ ನೀಡಿದವರಿಗೆ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:11 IST
Last Updated 2 ಮಾರ್ಚ್ 2017, 7:11 IST
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಡೆದ ರಸ್ತೆ ವಿಸ್ತರಣೆ ಸಂತ್ರಸ್ತರ ಪರಿಹಾರ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಚೆಕ್‌ ವಿತರಿಸಿದರು. ಜಯಮಹದೇವ್‌, ಡಾ.ಪ್ರಶಾಂತ್‌, ಎಚ್‌.ಎ. ಇಕ್ಬಾಲ್‌ ಹುಸೇನ್‌, ಎಂ.ಡಿ. ವಿಜಯದೇವು, ಎಚ್‌.ಬಸಪ್ಪ, ವಿಶ್ವನಾಥ್‌, ಕೆ.ಎಂ.ರಾಜೇಂದ್ರ, ಅಶೋಕ್‌, ಮುನಿಹುಚ್ಚೇಗೌಡ, ಏಳಗಳ್ಳಿ ರವಿ ಉಪಸ್ಥಿತರಿದ್ದರು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಡೆದ ರಸ್ತೆ ವಿಸ್ತರಣೆ ಸಂತ್ರಸ್ತರ ಪರಿಹಾರ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಚೆಕ್‌ ವಿತರಿಸಿದರು. ಜಯಮಹದೇವ್‌, ಡಾ.ಪ್ರಶಾಂತ್‌, ಎಚ್‌.ಎ. ಇಕ್ಬಾಲ್‌ ಹುಸೇನ್‌, ಎಂ.ಡಿ. ವಿಜಯದೇವು, ಎಚ್‌.ಬಸಪ್ಪ, ವಿಶ್ವನಾಥ್‌, ಕೆ.ಎಂ.ರಾಜೇಂದ್ರ, ಅಶೋಕ್‌, ಮುನಿಹುಚ್ಚೇಗೌಡ, ಏಳಗಳ್ಳಿ ರವಿ ಉಪಸ್ಥಿತರಿದ್ದರು   

ಕನಕಪುರ:  ರಸ್ತೆ ಬದಿಯ ನಿವಾಸಿಗಳು ದೊಡ್ಡ ಮನಸ್ಸು ಮಾಡಿ ಅಗಲ ಹೆಚ್ಚಳಕ್ಕೆ ಜಾಗ ಬಿಟ್ಟುಕೊಟ್ಟಿದ್ದರಿಂದ ಸಾತನೂರು ಮತ್ತು ಕೋಡಿಹಳ್ಳಿಯಲ್ಲಿ ವಿಶಾಲವಾದ ಉತ್ತಮ ರಸ್ತೆ ನಿರ್ಮಾಣವಾಯಿತೆಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ತಾಲ್ಲೂಕಿನ ಸಾತನೂರು ಮತ್ತು ಕೋಡಿಹಳ್ಳಿ ಗ್ರಾಮದಲ್ಲಿ ರಸ್ತೆ ಅಗಲೀಕರಣದಲ್ಲಿ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಹಣದ ಚೆಕ್‌ ವಿತರಣೆ ಮಾಡಿ ಮಾತನಾಡಿದರು.

ಕೇಂದ್ರದ ವಿಶೇಷ ಭೂ ಸ್ವಾಧೀನ ಕಾಯ್ದೆಯ ಅನ್ವಯ ಭೂಮಿ ಕಳೆದುಕೊಂಡವರಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರವನ್ನು ನೀಡಲಾಗುತ್ತಿದೆ. ಒಂದು ಅಡಿ ಜಾಗಕ್ಕೆ ₹1,200 ಕೊಡಲಾಗುತ್ತಿದೆ. ರಸ್ತೆ ವಿಸ್ತರಣೆ ಬಳಿಕ ಈ ಜಾಗಗಳಲ್ಲಿ ನಿವೇಶನದ ಬೆಲೆಯು ಅಡಿಗೆ ₹4ರಿಂದ 5 ಸಾವಿರ ಆಗಿದೆ. ಇಂದಿನ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಕೊಡುತ್ತಿರುವ ಪರಿಹಾರ ಕಡಿಮೆಯೇ ಎಂದು ಹೇಳಿದರು.

ರಾಮನಗರ ಭೂ ಸ್ವಾದೀನ ಇಲಾಖೆಯಿಂದ ಸಾತನೂರಿಗೆ ₹2.95 ಕೋಟಿ, ಕೋಡಿಹಳ್ಳಿಗೆ ₹5.60ಕೋಟಿ ಹಣವನ್ನು ಪರಿಹಾರವಾಗಿ ನೀಡಲಾಗಿದೆ, ಆಸ್ತಿಗಳ ಬೆಲೆ ಗಗನಕ್ಕೆ ಏರಿದೆ, ನಿಜವಾದ ಅಭಿವೃದ್ಧಿ ಎಂದರೆ ಇದೆ ಎಂದು ಹೇಳಿದರು. 

ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕಾವೇರಿ ನದಿಯಿಂದ ನೀರು ತರುವುದು, ಅಂತರ್ಜಲ ಹೆಚ್ಚಳಕ್ಕೆ ಕೆರೆತುಂಬಿಸುವುದು ಹಾಗೂ ರಸ್ತೆಯ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಲಾಗಿದೆ, ಕೋಡಿಹಳ್ಳಿ ಕನಕಪುರ ರಸ್ತೆಯು ತಮಿಳುನಾಡು ಆಂದ್ರಕ್ಕೆ ಸಂಪರ್ಕ ರಸ್ತೆಯು ರಾಜ್ಯ ಹೆದ್ದಾರಿ–3 ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದು ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ  ಕಾರ್ಯ ಶುರುವಾಗಲಿದೆ ಎಂದರು.

ಕೋಡಿಹಳ್ಳಿ ಹೋಬಳಿ ಕೇಂದ್ರವನ್ನು ನಗರ ಪ್ರದೇಶವಾಗಿ ಅಭಿವೃದ್ಧಿ ಪಡಿಸುತ್ತಿದ್ದು ಕೋಡಿಹಳ್ಳಿ ಕೆರೆಯನ್ನು ₹ 2.5 ಕೋಟಿ ವೆಚ್ಚದಲ್ಲಿ ಉದ್ಯಾನವಾಗಿ ಮಾಡಲಾಗುತ್ತಿದೆ, ₹70 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಸುಸಜ್ಜಿತವಾದ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿದ್ದು ಇನ್ನೇನು ಕಾಮಗಾರಿ ಮುಗಿಯಲಿದೆ ಎಂದರು.

40 ವರ್ಷಗಳಲ್ಲಿ ಕಾಣದಂತ ಭೀಕರ ಬರಗಾಲ ಕಾಣಿಸಿದೆ, ಕೊಳವೆ ಬಾವಿಗಳು ದಿನದಿಂದ ದಿನಕ್ಕೆ ಬತ್ತಿಹೋಗುತ್ತಿವೆ, ಇರುವ ನೀರಿನಲ್ಲೇ ಇನ್ನು ಮೂರು ತಿಂಗಳ ಕಾಲ ಕಳೆಯಬೇಕಿದ್ದು ಯಾರೂ ಮನೆಯ ಮುಂದೆಯೆ ನೀರು ಬೇಕೆಂದು ಬಯಸದೆ ಇರುವ ಕಡೆ ಹೊಂದಾಣಿಕೆ ಮಾಡಿ ನೀರು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಬಿ.ಎಂ.ಐ.ಸಿ. ಮಾಜಿ ಅಧ್ಯಕ್ಷ ಎಚ್‌.ಕೆ.ಶ್ರೀಕಂಠು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಡಿ.ವಿಜಯದೇವು, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೀತಾಲಕ್ಷ್ಮೀ, ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಶಿವರಾಂ, ಮುಖಂಡರಾದ ಎಸ್‌.ಜೆ.ನಾಗರಾಜು, ಮಂಜು, ಅನಿಲ, ಚಂದ್ರಶೇಖರ್‌, ನಾಗೇಂದ್ರ, ರಮೇಶ್‌.ಸಿ, ನಿಜಲಿಂಗಪ್ಪ, ಚಂದ್ರಶೇಖರ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.