ADVERTISEMENT

ಜಾರಿಯಾಗದ ಕುಡಿಯುವ ನೀರು ಯೋಜನೆ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾಗಡಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಕಾಂತರಾಜು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 11:29 IST
Last Updated 18 ಏಪ್ರಿಲ್ 2015, 11:29 IST

ಮಾಗಡಿ: ಮಂಚನಬೆಲೆ ಜಲಾಶಯದಿಂದ ತಾಲ್ಲೂಕಿನ 3 ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ₹11 ಕೋಟಿ ಯೋಜನೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ  ಅನುಷ್ಠಾನಗೊಂಡಿಲ್ಲ. ಹೀಗಾಗಿ ಜಲಾಶಯದ ನೀರು ರಾಮನಗರಕ್ಕೆ ಹರಿದು ಹೋಯಿತು ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಕಾಂತರಾಜು ಜಿ.ಪಂ.  ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.

ತಾ,ಪಂ, ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ವಿವಿಧೆಡೆಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಮಂಚನಬೆಲೆ ಜಲಾಶಯದಿಂದ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು  ಶೀಘ್ರ ಪೂರ್ಣಗೊಳಿಸಿದ್ದರೆ ಕುಡಿಯುವ ನೀರಿನ ಕಷ್ಟ ತಪ್ಪುತ್ತಿತ್ತು. ಅಧಿಕಾರಿಗಳು ಮಹತ್ವದ ಯೋಜನೆ ಕೈತಪ್ಪದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ 12 ಸಾವಿರಸಸಿಗಳನ್ನು ನೆಟ್ಟಿರುವುದಾಗಿ ಸುಳ್ಳು ಹೇಳಿ ಸರ್ಕಾರದ ಅನುದಾನ ಗುಳುಂ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ತಾ.ಪಂ.ಸದಸ್ಯ ಶಂಕರಪ್ಪ ಆಗ್ರಹಿಸಿದರು. ಕೈಗಾರಿಕಾ ವಿಸ್ತರಣಾಧಿಕಾರಿ ಪುಷ್ಪಲತಾ ಪರಿಶಿಷ್ಟ ಜಾತಿಯ 12 ಜನ ಮತ್ತು ಪರಿಶಿಷ್ಟ ಪಂಗಡದ 6 ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ತಾ.ಪಂ.ಅಧ್ಯಕ್ಷೆ ಅನುಸೂಯಮ್ಮ ಮರಿಗೌಡ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಎಂ.ರಾಮಣ್ಣ, ತಾ.ಪಂ. ಸದಸ್ಯರಾದ ಅನುಸೂಯ ಕಾಂತರಾಜು, ಭಾರತಿ ಮಹದೇವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.