ADVERTISEMENT

‘ಜೆಡಿಎಸ್‌ನಿಂದ ಹಿಂಬಾಗಿಲ ರಾಜಕಾರಣ’

ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಬಾಲಕೃಷ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:19 IST
Last Updated 26 ಏಪ್ರಿಲ್ 2018, 13:19 IST
ಎಚ್‌.ಸಿ. ಬಾಲಕೃಷ್ಣ
ಎಚ್‌.ಸಿ. ಬಾಲಕೃಷ್ಣ   

ರಾಮನಗರ: ‘ನಮ್ಮನ್ನು ಅನರ್ಹಗೊಳಿಸಬೇಕು ಎಂದು ಅರ್ಜಿ ಕೊಡುವ ಮೂಲಕ ಜೆಡಿಎಸ್ ಮುಖಂಡರು ಹಿಂಬಾಗಿಲಿನಿಂದ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಕಿಡಿಕಾರಿದರು.

ಕೂಟಗಲ್‌ ಹೋಬಳಿಯ ಜಾಲಮಂಗಲದಲ್ಲಿ ಬುಧವಾರ ಮತಯಾಚನೆ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಈಗಾಗಲೇ ಚುನಾವಣಾ ರಣರಂಗಕ್ಕೆ ಇಳಿದಿದ್ದೇವೆ. ನಾವು ತಪ್ಪು ಮಾಡಿದ್ದರೆ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಏಳು ಜನರು ಗೆಲ್ಲುತ್ತೇವೆ ಎಂಬ ಭಯದಿಂದ ಜೆಡಿಎಸ್‌ ಹಿಂಬಾಗಿಲ ರಾಜಕಾರಣಕ್ಕೆ ಮುಂದಾಗಿದೆ’ ಎಂದು ಅವರು ದೂರಿದರು.

‘ದೇವೇಗೌಡರು ಮುಖ್ಯಮಂತ್ರಿ ಆಗುತ್ತಾರೆ ಎಂದ ಚುನಾವಣೆಯಲ್ಲಿಯೇ ನಾನು ಬಿಜೆಪಿಯಿಂದ ಗೆದ್ದಿದ್ದೆ. ಉಪ ಚುನಾವಣೆಯಲ್ಲಿ ಯಡಿಯೂರಪ್ಪ ನನ್ನನ್ನೇ ಸ್ಪರ್ಧೆ ಮಾಡು ಎಂದಿದ್ದರು. ಹಾಗಾಗಿದ್ದರೆ ಗೌಡರು ಖಂಡಿತ ಗೆಲ್ಲಲು ಆಗುತ್ತಿರಲಿಲ್ಲ. ದೇವೇಗೌಡರು ಸೋಲಬಾರದು ಎಂದು ನನ್ನನ್ನು ಜೆಡಿಎಸ್‌ಗೆ ಕರೆತಂದರು’ ಎಂದು ವಿವರಿಸಿದರು.

ADVERTISEMENT

‘ಬಿಜೆಪಿಯಲ್ಲಿ ಆರ್. ಅಶೋಕ್ ನನಗಿಂತ ಜೂನಿಯರ್. ಜಗದೀಶ ಶೆಟ್ಟರ್, ಸದಾನಂದಗೌಡರು ನನ್ನ ಎಡ–ಬಲದಲ್ಲಿ ಕೂರುತ್ತಿದ್ದರು. ನಾವೆಲ್ಲ ಸಮಕಾಲೀನರು. ಇವತ್ತು ನಾನು ಬಿಜೆಪಿಯಲ್ಲೇ ಇದ್ದಿದ್ದರೆ ಉಪ ಮುಖ್ಯಮಂತ್ರಿ ಆಗುತ್ತಿದ್ದೆ. ನಿಮಗೋಸ್ಕರ ತ್ಯಾಗ ಮಾಡಿದವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಲ್ಲವಾ’ ಎಂದು ಜೆಡಿಎಸ್ ನಾಯಕರನ್ನು ಪ್ರಶ್ನಿಸಿದರು.

‘ಇಬ್ರಾಹಿಂ, ಸಿದ್ದರಾಮಯ್ಯರನ್ನು ನಂಬಿ ಹೋದವರೆಲ್ಲ ಇಂದು ಏನೇನೋ ಆಗಿದ್ದಾರೆ. ನಾವು ಏಳು ಜನರಿಗೆ ಟಿಕೆಟ್ ನೀಡಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ವಿರೋಧವಿತ್ತು. ಆದರೂ ಸಿದ್ದರಾಮಯ್ಯ ನಮ್ಮನ್ನು ಕಾಪಾಡಿದರು. ಅದು ನಾಯಕತ್ವದ ಗುಣ. ಜೊತೆಯಲ್ಲಿದ್ದವರನ್ನು ದಡ ಮುಟ್ಟಿಸುವವನೇ ನಿಜವಾದ ನಾಯಕ. ಅನುಕೂಲವಾದಾಗ ಉಪಯೋಗಿಸಿಕೊಂಡು, ಇದ್ದಾಗ ಒದೆಯುವವನು ನಾಯಕನಲ್ಲ’ ಎಂದು ಪರೋಕ್ಷವಾಗಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಂಡಾಯ ಶಾಸಕರ ಕುರಿತು ನಿಖಿಲ್ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ಇವರ ತಂದೆಯನ್ನು ಸಿಂಹಾಸನದ ಮೇಲೆ ಕೂರಿಸಿದ್ದು ನಾವೇ. ಇವರ ತಾತನನ್ನು, ದೊಡ್ಡಪ್ಪನನ್ನು ಅದಕ್ಕಾಗಿ ವಿರೋಧ ಕಟ್ಟಿಕೊಂಡೆವು. ಸ್ಪೀಕರ್ ಚೇಂಬರ್‌ನಲ್ಲಿ ಮುಖ್ಯಮಂತ್ರಿ ವಿಚಾರದಲ್ಲಿ ಗಲಾಟೆ ಮಾಡಿದ್ದು ರೇವಣ್ಣ. ಎಚ್‌ಡಿಕೆ ಸಿಎಂ ಮಾಡುತ್ತೇವೆ ಎಂದು ಅವರನ್ನು ಆಚೆಗೆ ತಳ್ಳಿದ್ದೆವು’ ಎಂದರು.

ದುಡ್ಡು ಮಾಡಿಕೊಂಡ ಕುಟುಂಬ

‘ನಂತರದ ಮೂರೇ ತಿಂಗಳಲ್ಲಿ ಕುಮಾರಸ್ವಾಮಿ ರೇವಣ್ಣರಿಗೆ 2 ಖಾತೆ ಕೊಟ್ಟು ಮಂತ್ರಿ ಮಾಡಿದರೇ ಹೊರತು ನಮ್ಮನ್ನಲ್ಲ. ಆಮೇಲೆ ಎಲ್ಲಕ್ಕೂ ಸಹಿ ಮಾಡೋದಕ್ಕೆ ದೇವೇಗೌಡರು ಶುರು ಮಾಡಿದರು’ ಎಂದು ಬಾಲಕೃಷ್ಣ ದೂರಿದರು. ‘ಬಾಲಕೃಷ್ಣೇಗೌಡ ಎಲ್ಲ ಕಡೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡರು. ನಿಜವಾಗಿ ದುಡ್ಡು ಮಾಡಿಕೊಂಡಿದ್ದು ನಿಖಿಲ್ ಕುಮಾರಸ್ವಾಮಿ ಅವರ ಕುಟುಂಬ. ಬೆನ್ನಿಗೆ ಚೂರಿ ಹಾಕಿದ್ದು ಅವರ ದೊಡ್ಡಪ್ಪ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.