ADVERTISEMENT

ದಡಾರ, ರುಬೆಲ್ಲಾ ಲಸಿಕೆ ನೀಡಲು 2,439 ಕೇಂದ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 9:05 IST
Last Updated 6 ಫೆಬ್ರುವರಿ 2017, 9:05 IST
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಡಾರ - ರುಬೆಲ್ಲಾ ಲಸಿಕಾ ಅಭಿಯಾನದ 2ನೇ ಸುತ್ತಿನ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್‌. ಪ್ರಶಾಂತ್ ಕರಪತ್ರ ಬಿಡುಗಡೆ ಮಾಡಿದರು
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಡಾರ - ರುಬೆಲ್ಲಾ ಲಸಿಕಾ ಅಭಿಯಾನದ 2ನೇ ಸುತ್ತಿನ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್‌. ಪ್ರಶಾಂತ್ ಕರಪತ್ರ ಬಿಡುಗಡೆ ಮಾಡಿದರು   

ರಾಮನಗರ: ‘ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ರುಬೆಲ್ಲಾ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಎಲ್ಲಾ  ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಮಾಹಿತಿ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಡಾರ - ರುಬೆಲ್ಲಾ ಲಸಿಕಾ ಅಭಿಯಾನದ 2ನೇ ಸುತ್ತಿನ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯಲ್ಲಿ  ಅವರು ಮಾತನಾಡಿದರು.

‘ನುರಿತ ಆರೋಗ್ಯ ಸಿಬ್ಬಂದಿ ಮಕ್ಕಳಿಗೆ ಲಸಿಕೆ ನೀಡಬೇಕು. ಲಸಿಕೆ ನೀಡಿದಾಗ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ  ಆಯಾಯ ವ್ಯೆದ್ಯರ ದೂರವಾಣಿ ಸಂಖ್ಯೆ ಲಭ್ಯವಿರಬೇಕು ಹಾಗೂ ಕೂಡಲೇ ಸ್ಪಂದಿಸಬೇಕು’ ಎಂದು ಸೂಚನೆ ನೀಡಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಪ್ರಚಾರ ಮಾಡಬೇಕು. ಕರಪತ್ರಗಳನ್ನು ವಿತರಿಸಿ ಪೋಷಕರ ಮನವೊಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ಆರ್‌.ಎನ್‌. ಲಕ್ಷ್ಮೀಪತಿ ಮಾತನಾಡಿ, ‘ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಡಿ ಜಿಲ್ಲೆಯಲ್ಲಿರುವ 9 ತಿಂಗಳಿಂದ 15 ವರ್ಷದ ಒಳಗಿನ 2,30,329 ಮಕ್ಕಳಿಗೆ ಲಸಿಕೆ ನೀಡಲು 2,439 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲೆಯ 1,352 ಶಾಲೆ, 1,112 ಅಂಗನವಾಡಿ ಕೇಂದ್ರ ಮತ್ತು 118 ಇತರೆ ಸ್ಥಳಗಳಲ್ಲಿ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದರು.

‘ಲಸಿಕಾ ಕಾರ್ಯಕ್ಕಾಗಿ ಒಟ್ಟು 268 ನುರಿತ ಆರೋಗ್ಯ ಸಿಬ್ಬಂದಿ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಶುಶ್ರೂಷಕಿ) ನಿಯೋಜಿಸಲಾಗಿದೆ. ಅಲ್ಲದೇ ಆರೋಗ್ಯ ಸಿಬ್ಬಂದಿಯವರಿಗೆ, ಶಾಲಾ ಶಿಕ್ಷಕರಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿಯನ್ನು ನೀಡಲಾಗಿದೆ. ಈ ಲಸಿಕೆಯ ಹೆಚ್ಚಿನ ಮಾಹಿತಿ ಪೋಷಕರಿಗೆ ತಿಳಿಸುತ್ತಾ, ಮಕ್ಕಳನ್ನು ಈ ಲಸಿಕಾ ಕೇಂದ್ರಗಳಿಗೆ ಕರೆತರಲು ಕೋರಲಾಗುವುದು’ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಎಸ್.ಮಲ್ಹೋತ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಚ್.ಆರ್ . ರಾಜಪ್ಪ, ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್ ಖಾನ್, ಸಮಾಜ ಕಲ್ಯಾಣ ಇಲಾಖೆಯ ಎಂ.ನಾಗರಾಜು,  ತಾಲ್ಲೂಕು ಆರೋಗ್ಯಾýಧಿಕಾರಿ ಡಾ.ಅರುಣ್ ಕುಮಾರ್ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ ಶಿವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.