ADVERTISEMENT

ದ್ಯಾವಸಂದ್ರ ಗ್ರಾ.ಪಂ. ಕಟ್ಟಡ ಉದ್ಘಾಟನೆ ಮುಂದೂಡಿಕೆ

ಏಕಪಕ್ಷೀಯ ನಿರ್ಧಾರ: ಅಧ್ಯಕ್ಷರ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 11:22 IST
Last Updated 1 ನವೆಂಬರ್ 2014, 11:22 IST

ಕನಕಪುರ: ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆಯನ್ನು ಯಾರ ಗಮನಕ್ಕೂ ತಾರದೆ ಪಂಚಾಯಿತಿ ಅಧ್ಯಕ್ಷ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಂದು ಸರ್ವ ಸದಸ್ಯರು ಆರೋಪಿಸಿ ಕಟ್ಟಡದ ಉದ್ಘಾಟನೆಯನ್ನು ಮುಂದೂಡಿದ ಘಟನೆ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದ್ಯಾವಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಎಲ್ಲ ಸದಸ್ಯರು ಅಧ್ಯಕ್ಷರ ವಿರುದ್ದ ವಾಗ್ದಾಳಿ ನಡೆಸಿ ಯಾರ ಗಮನಕ್ಕೂ ತಾರದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲು ಪಂಚಾಯಿತಿ ಕಟ್ಟಡ ಖಾಸಗಿ ಸ್ವತ್ತಲ್ಲ. ಸಾರ್ವಜನಿಕರ ಸ್ವತ್ತಾಗಿದ್ದು ಸರ್ವಸದಸ್ಯರ ಸಭೆ ಕರೆದು ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಿ ನಂತರ ಉದ್ಘಾಟನೆ ಮಾಡಬೇಕಿತ್ತು ಎಂದು ಹರಿಹಾಯ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತಾರದೆ ನ. 3 ರಂದು ಕಟ್ಟಡ ಉದ್ಘಾಟಿಸುವುದಾಗಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಅಧ್ಯಕ್ಷರನ್ನು ಹೊರತು ಪಡಿಸಿ ಬೇರಾರಿಗೂ ಕಟ್ಟಡ ಉದ್ಘಾಟನೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಇಂದು ತುರ್ತು ಸಭೆ ಕರೆದು ಸಭೆಯಲ್ಲಿ ಉದ್ಘಾಟನೆಯ ವಿಷಯವನ್ನು ತಿಳಿಸಲಾಗಿದೆ. ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅನಿವಾರ್ಯತೆ ಏನಿತ್ತೆಂದು ತರಾಟೆಗೆ ಅಧ್ಯಕ್ಷರನ್ನು ತೆಗೆದುಕೊಂಡರು.

ಕೆಲವು ಗಂಟೆಗಳ ಕಾಲ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಂತರ ಸಭೆಯಲ್ಲಿ ಕಟ್ಟಡ ಉದ್ಘಾಟನೆಯನ್ನು ಮುಂದೂಡಿ ಸಭೆ ಕರೆದು ದಿನಾಂಕ ನಿಗದಿಪಡಿಸಿ ಉದ್ಘಾಟನೆ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.

ಗಮನಕ್ಕೆ ಬಂದಿಲ್ಲ: ಪಂಚಾಯಿತಿ ಮೊದಲ ಅಂತಸ್ತಿನ ಕಟ್ಟಡವು ಗ್ರಾಮ ಸ್ವರಾಜ್ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಪಂಚಾಯಿತಿ ಅಧ್ಯಕ್ಷ ಮೂರ್ತಿ ಅವರು ನಮ್ಮ ಗಮನಕ್ಕೂ ತಾರದೆ ಏಕಪಕ್ಷೀಯವಾಗಿ ದಿನಾಂಕ ನಿಗದಿಮಾಡಿ ಆಮಂತ್ರಣವನ್ನು ಮುದ್ರಿಸಿದ್ದಾರೆ. ಆ ರೀತಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ವ ಸದಸ್ಯರು ಇದಕ್ಕ ವಿರೋದ ವ್ಯಕ್ತಪಡಿಸಿದ್ದು ಮುಂದೆ ಸಭೆ ಕರೆದು ಉದ್ಘಾಟನೆಯ ದಿನಾಂಕವನ್ನು ನಿಗದಿ ಪಡಿಸಲಾಗುವುದೆಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜೆ.ರಾಜೇಶ್ವರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.