ADVERTISEMENT

ಬೆಂಕಿ ಆಕಸ್ಮಿಕ: ಕಡತಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 10:58 IST
Last Updated 21 ಜನವರಿ 2017, 10:58 IST
ಬೆಂಕಿ ಆಕಸ್ಮಿಕ: ಕಡತಗಳು ಭಸ್ಮ
ಬೆಂಕಿ ಆಕಸ್ಮಿಕ: ಕಡತಗಳು ಭಸ್ಮ   

ರಾಮನಗರ: ಬೆಂಕಿ ಆಕಸ್ಮಿಕದಿಂದಾಗಿ ತಾಲ್ಲೂಕು ಆಡಳಿತಕ್ಕೆ ಸೇರಿದ ಕಡತಗಳು ಸುಟ್ಟು ಭಸ್ಮವಾದ ಘಟನೆ ಇಲ್ಲಿನ ಮಿನಿ ವಿಧಾನಸೌಧದ ತಳಮಹಡಿಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ನೆಲ ಮಹಡಿಯಲ್ಲಿ ರಾತ್ರಿ ೧೧ ಗಂಟೆಗೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಪಕ್ಕದಲ್ಲಿಯೇ ಇದ್ದ ಉಪ ವಿಭಾಗಾಧಿಕಾರಿ ರಾಜೇಂದ್ರಪ್ರಸಾದ್‌ ಅವರ ನಿವಾಸಕ್ಕೆ ತೆರಳಿ ಸುದ್ದಿ ಮುಟ್ಟಿಸಿದರು. ಕೂಡಲೇ ಎಚ್ಚೆತ್ತ ಅವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಸುದ್ದಿ ತಿಳಿಸಿದರು. ತಾವೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಸುಮಾರು ಮೂರು ಗಂಟೆ ಕಾಲ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು.

ಚುನಾವಣೆಗೆ ಸಂಬಂಧಿಸಿದ ಕೆಲವು ದಾಖಲೆಗಳು, ಸಾಮಗ್ರಿಗಳನ್ನು ಇಡಲಾಗಿದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಎಲ್ಲ ದಾಖಲೆಗಳು ಅಗ್ನಿಗೆ ಆಹುತಿಯಾಗಿವೆ. ಪಕ್ಕದಲ್ಲಿಯೇ ಭೂಮಿ ಕೇಂದ್ರ ಹಾಗೂ ಕಂದಾಯ ಇಲಾಖೆಗೆ ಸೇರಿದ ದಾಖಲೆಗಳ ಕೊಠಡಿಗಳು ಇದ್ದು, ಅಲ್ಲಿಗೆ ಬೆಂಕಿ ವ್ಯಾಪಿಸುವ ಮುನ್ನವೇ ಕಾರ್ಯಾಚರಣೆ ಮೂಲಕ ಅಗ್ನಿಶಮನ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ADVERTISEMENT

ಶಾರ್ಟ್‌ಸರ್ಕೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಉಪವಿಭಾಗಾಧಿಕಾರಿ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ದಳದ ಶ್ರಮದಿಂದಾಗಿ ಹೆಚ್ಚಿನ ಹಾನಿ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.