ADVERTISEMENT

ಮಾವಿನಲ್ಲಿ ಹೂ: ಉತ್ತಮ ಇಳುವರಿ ನಿರೀಕ್ಷೆ

ರಾಮನಗರ: ಒಳ್ಳೆಯ ಬೆಳೆ ನಿರೀಕ್ಷೆಯಲ್ಲಿರುವ ಮಾವು ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 10:29 IST
Last Updated 8 ಫೆಬ್ರುವರಿ 2016, 10:29 IST
ರಾಮನಗರ ತಾಲ್ಲೂಕಿನ ವಡ್ಡರದೊಡ್ಡಿಯ ಪ್ರಗತಿಪರ ರೈತ ಎಸ್.ಟಿ. ಕಾಂತರಾಜ್ ಪಟೇಲ್ ಅವರ ಮಾವಿನ ತೋಟದಲ್ಲಿ ಮಾವು ಹೂ ಬಿಟ್ಟು ಅರಳಿರುವುದು
ರಾಮನಗರ ತಾಲ್ಲೂಕಿನ ವಡ್ಡರದೊಡ್ಡಿಯ ಪ್ರಗತಿಪರ ರೈತ ಎಸ್.ಟಿ. ಕಾಂತರಾಜ್ ಪಟೇಲ್ ಅವರ ಮಾವಿನ ತೋಟದಲ್ಲಿ ಮಾವು ಹೂ ಬಿಟ್ಟು ಅರಳಿರುವುದು   

ರಾಮನಗರ: ವೈವಿಧ್ಯಮಯ ಮಾವು ಹಣ್ಣಗಳನ್ನು ಕಸಿ ಮಾಡಿರುವ ಕೃಷಿಕರು ಈಗ ಖುಷಿಯಾಗಿದ್ದಾರೆ. ಮಾವು ಬೆಳೆದ ರೈತರು ಈಗ ಸರಿಯಾಗಿ ನಿರ್ವಹಣೆ ಮಾಡಿದರೆ ಈ ವರ್ಷ ಉತ್ತಮ ಇಳುವರಿ ಸಾಧ್ಯ ಎಂಬುದು ಕೃಷಿ ವಿಜ್ಞಾನಿಗಳ ಮಾತು.

ದಟ್ಟ ಹೂಗಳನ್ನು ಅರಳಿಸಿರುವ ಮಾವಿನ ಮರದಲ್ಲಿ ಈಗ ಈಚು ಕಾಯಿಗಳು ಕಾಣಿಸಿಕೊಂಡಿವೆ. ಆದರೆ ಶ್ರವಣ ಮಳೆ ನಕ್ಷತ್ರದಲ್ಲಿ ಬದಲಾಗುವ ಉಷ್ಣಾಂಶ ಹಾಗೂ ಚಳಿಯಿಂದ ಫಲ ಕಚ್ಚಿದ ಗಿಡದಲ್ಲಿ ಅಲ್ಲಲ್ಲಿ ಪೀಡೆಕಾಟ ಕಾಣಿಸಿಕೊಂಡಿದೆ. ಬೇಸಾಯಗಾರರು ನಿರ್ವಹಣೆ ಕೈಗೊಂಡಲ್ಲಿ ಉತ್ತಮ ಫಲ ಪಡೆಯಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಜಿಲ್ಲೆಯ ಬಹುಪಾಲು ರೈತರು ಹಣ್ಣಿನ ಬೆಳೆ ಅವಲಂಬಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಮಾವು ಕಸಿಗೂ ಮೀಸಲಾಗಿದೆ. ಚೆನ್ನಾಗಿ ನೀರು ಬಸಿದು ಹೋಗುವ ಕೆಂಪುಗೋಡು ಮಣ್ಣಿನಲ್ಲಿ ಬೆಳೆಯಲು ಹೆಚ್ಚು ಆದ್ಯತೆ ನೀಡಿದ ವಾಣಿಜ್ಯ ಹಿಡುವಳಿದಾರರು ವೈಜ್ಞಾನಿಕ ಕೃಷಿಗೆ ಮನ್ನಣೆ ನೀಡಿದ್ದಾರೆ.

ತೇವಾಂಶ ಮತ್ತು ಒಣ ಹವೆಯಿಂದ ಕೂಡಿದ ಹವಾಮಾನ ಕಳೆದ ವಾರದಿಂದಲೂ ಎಲ್ಲೆಡೆ ಕಾಣಿಸಿಕೊಂಡಿದೆ. ಈಗ ಹೂ ಹಂತ ತಲುಪಿದೆ. ವಾತಾವರಣದಲ್ಲಾದ ಬದಲಾವಣೆಯಿಂದ ಸ್ಥಳೀಯ ಹಾಗೂ ಕುಲಾಂತರಿ ತಳಿಗಳಿಗೆ ಹಲವು ರೋಗಗಳು ಕಾಣಿಸಿಕೊಂಡಿವೆ.

ತಳಿಗಳು: ಜಿಲ್ಲೆಯಲ್ಲಿ ಬಾದಾಮಿ, ಐಶ್ವರ್ಯ, ರಸಪುರಿ, ತೋತಾಪುರಿ, ಮಲಗೋವ, ನೀಲಂ, ದಶಹರಿ ತಳಿಗಳಿಗೆ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಬೆಳೆಯುತ್ತವೆ. ಹಲವರು ಕೇಸರ್, ಖಾದರ್, ಪಂಚಧಾರ ಕಳಸ ಬೆಳೆಯಲು ಆಸಕ್ತಿ ತೋರಿದವರು ಇದ್ದಾರೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಎಸ್.ಟಿ. ಕಾಂತರಾಜ್ ಪಟೇಲ್.

ಕೀಟ ಹಾವಳಿ: ಈಗ ಹೂ ಮತ್ತು ಕಾಯಿ ಕಟ್ಟುವ ಸಮಯ, ಹೊಸ ಚಿಗುರು, ಹೂ ಗೊಂಚಲು ಮತ್ತು ಎಲೆಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳೂ ಉದುರುತ್ತವೆ ಹಾಗೂ ಎಲೆಗಳು ಮುರುಟಾಗುತ್ತವೆ. ಎಳೆಯ ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿ ಕೂಡ ಉದುರುತ್ತವೆ. ಬೆಣೆ ಆಕಾರದ ಹುಳು ಕಂಡುಬರುತ್ತವೆ.

ಪ್ರೌಢ ಮತ್ತು ಅಪ್ಸರೆ ಹೂ ಗೊಂಚಲಿನಿಂದ ರಸ ಹೀರುತ್ತವೆ. ಇದರಿಂದ ಹೂ ಉದುರಲು ಕಾರಣವಾಗುತ್ತದೆ. ಕೀಟಗಳು ಅಂಟು ಪದಾರ್ಥ ಸ್ರವಿಸುವುದರಿಂದ ಗೊಂಚಲಿನಲ್ಲಿ ಕಪ್ಪು ಬೂಷ್ಟ್ ಕಾಣಿಸುತ್ತದೆ ಎನ್ನುತ್ತಾರೆ. 'ಧನಿಷ್ಠ ಮಳೆ ನಕ್ಷತ್ರದಲ್ಲಿ ಹೂ ಬಿಡುತ್ತಿತ್ತು. ಈ ಭಾರಿ ಜನವರಿ ವೇಳೆ ಕಂಡುಬಂದ ತುಂತುರು ಹನಿ ಹಾಗೂ ಶೀತ ಮಾವು ಬೆಳೆಗೆ ಮಾರಕವಾಗಿದೆ. ಆದರೂ, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದೇವೆ' ಎನ್ನುತ್ತಾರೆ ಇವರು.

ಸಲಹೆ: ಮಾವು ಹೂ ಮತ್ತು ಕಾಯಿ ಕಚ್ಚುವ ಹಂತದಲ್ಲಿದೆ. ಜಿಗಿಹುಳು ಮತ್ತು ಬೂದಿರೋಗ ಲಕ್ಷಣಗಳು ಈ ವೇಳೆಗೆ ಕಾಣಿಸಿಕೊಳ್ಳುತ್ತದೆ. ತಕ್ಷಣ ಹಣ್ಣು ಬೆಳೆಗಾರರು ಸೂಕ್ತ ಬೆಳೆ ನಿರ್ವಹಣೆ ಕೈಗೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದು.

ಜಿಗಿಹುಳು ನಿಯಂತ್ರಿಸಲು 1 ಲೀಟರ್ ನೀರಿಗೆ 0.50 ಮಿ.ಲೀ ಇಮಿಡಾಕ್ಲೋಪ್ರಿಡ್ ಬೆರಸಿ ಸಿಂಪಡಿಸಬೇಕು. ಬೂದಿರೋಗ ತಡೆಗಟ್ಟಲು 1 ಲೀಟರ್ ನೀರಿಗೆ 2 ಗ್ರಾಂ ಕಾಬರ್ೆನ್ಡೈಜಿಮ್ ನೀರಲ್ಲಿ ಕರಗಿಸಿ ಭಾದಿತ ಗಿಡಕ್ಕೆ ಸಿಂಪಡಿಸಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕೆ.ಎನ್. ರೂಪಶ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.