ADVERTISEMENT

ಯೋಜನೆಗೆ ಚಾಲನೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:56 IST
Last Updated 25 ಮೇ 2017, 7:56 IST

ರಾಮನಗರ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೈಗೊಳ್ಳಲಾದ ಮಾಗಡಿ ತಾಲ್ಲೂಕಿನ ವೈ.ಜಿ. ಗುಡ್ಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಮಂಚನಬೆಲೆ ಕುಡಿಯುವ ನೀರಿನ ಯೋಜನೆಗೆ ಶಾಸಕ ಎಚ್‌.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಚಾಲನೆ ನೀಡಿರುವ ಕುರಿತು ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

‘ಅರ್ಧದಲ್ಲಿಯೇ ನಿಂತ ಯೋಜನೆಗೆ ಜಿ.ಪಂ. ವತಿಯಿಂದ ಹೆಚ್ಚಿನ ಅನುದಾನ ನೀಡಿ ಕಾಯಕಲ್ಪ ನೀಡಲಾಗುತ್ತಿದೆ. ಹೀಗಿರುವಾಗ ಯೋಜನೆ ಪೂರ್ಣಗೊಂಡ ಬಗ್ಗೆ ಇಲ್ಲಿನ ಅಧ್ಯಕ್ಷರ ಸಹಿತ ಯಾರೊಬ್ಬರಿಗೂ ಮಾಹಿತಿ ನೀಡಿಲ್ಲ.

ಶಾಸಕರ ಅಣತಿಯಂತೆ ಅದಾಗಲೇ ಅನಧಿಕೃತವಾಗಿ ಉದ್ಘಾಟನೆ ಮಾಡಿ ನೀರನ್ನೂ ಪೂರೈಸಲಾಗುತ್ತಿದೆ’ ಎಂದು ಸದಸ್ಯ ಎ. ಮಂಜು ಹಾಗೂ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

‘ಹಣಕಾಸು ಸಮಸ್ಯೆ ಎದುರಿಸುತ್ತಿದ್ದ ಯೋಜನೆಗೆ ಶಾಸಕರು ₹10 ಲಕ್ಷ ನೆರವು ನೀಡಿ, ಯೋಜನೆ ಪೂರ್ಣಗೊಳಿಸಿದ್ದಾರೆ’ ಎಂದು ಸದಸ್ಯ ಎಚ್.ಎನ್‌. ಅಶೋಕ್‌ ಸಮರ್ಥಿಸಿಕೊಂಡರು.

‘ವೈ.ಜಿ. ಗುಡ್ಡ ಹಾಗೂ ಮಂಚನಬೆಲೆ ಯೋಜನೆ ಅಡಿ ಕಳೆದ ಫೆಬ್ರುವರಿಯಿಂದ ಸುತ್ತಲಿನ ಗ್ರಾಮಗಳಿಗೆ ಕಚ್ಚಾ ನೀರು ಪೂರೈಕೆ ಮಾಡಲಾಗಿತ್ತು. ಇದೇ ತಿಂಗಳ 2ರಿಂದ ಈ ಹಳ್ಳಿಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.