ADVERTISEMENT

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಅನುಷ್ಠಾನಕ್ಕೆ ಸೂಚನೆ

ಜಿಲ್ಲೆಯ 3.14 ಲಕ್ಷ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 8:54 IST
Last Updated 25 ಅಕ್ಟೋಬರ್ 2014, 8:54 IST

ರಾಮನಗರ: ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ವಿಮಾ ಹಾಗೂ ಟಿ.ಪಿ.ಎ. ಕಂಪೆನಿಗಳ ಮೂಲಕ ಕಾರ್ಮಿಕ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ  ಉದ್ದೇಶವಾಗಿದೆ ಎಂದರು.

ಜಿಲ್ಲೆಯ 3.14 ಲಕ್ಷ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ನಿರ್ಧರಿಸಲಾಗಿದೆ. ರಾಮನಗರ ತಾಲೂಕಿನ 24 ಗ್ರಾ.ಪಂ. ವ್ಯಾಪ್ತಿಯ 125 ಹಳ್ಳಿಗಳಲ್ಲಿ ಇರುವ 69,983 ಕುಟುಂಬಗಳಿಗೆ, ಮಾಗಡಿಯ 33 ಗ್ರಾ.ಪಂ. ವ್ಯಾಪ್ತಿಯ 253 ಹಳ್ಳಿಯ  55,653 ಕುಟುಂಬಗಳಿಗೆ, ಚನ್ನಪಟ್ಟಣದ 33 ಗ್ರಾ.ಪಂ. ವ್ಯಾಪ್ತಿಯ 134 ಹಳ್ಳಿಯ 72,671 ಕುಟುಂಬಗಳು ಹಾಗೂ ಕನಕಪುರದ 44 ಗ್ರಾ.ಪಂ. ವ್ಯಾಪ್ತಿಯ 304 ಹಳ್ಳಿಯ 1,15,853 ಕುಟುಂಬಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುವುದು ಎಂದು ತಿಳಿಸಿದರು.

ಈ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ವ ಕುಟುಂಬ ಸಮೀಕ್ಷೆಯಲ್ಲಿ ಗುರುತಿಸಿಲಾಗಿರುವ ಫಲಾನುಭವಿ ಕಾರ್ಮಿಕ ಕುಟುಂಬದ ಸದಸ್ಯರು. ನಗರ ಬಿಪಿಎಲ್ ಕುಟುಂಬದ ಕಾರ್ಮಿಕರು, ಪರವಾನಗಿ ಪಡೆದಿರುವ ರೈಲ್ವೆ ಇಲಾಖೆಯ ವೆಂಡರ್ಸ್, ಹಾಕರ್ಸ್ ಮತ್ತು ಹಮಾಲಿಗಳು, ಕಟ್ಟಡ ಕಾರ್ಮಿಕರು, ಬೀದಿಬದಿ ಮಾರಾಟಗಾರರು, ಬೀಡಿ ಕಾರ್ಮಿಕರು ಮತ್ತು ಮನೆ ಕೆಲಸದವರು ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.

ಈ ಯೋಜನೆ ಅನ್ವಯ  ಫಲಾನುಭವಿಗಳಿಗೆ ತಮ್ಮ ಬೆರಳ ಗುರುತು ಹಾಗೂ ಛಾಯಾ ಚಿತ್ರವುಳ್ಳ ಬಯೋಮೆಟ್ರಿಕ್ ಸ್ಮಾರ್ಟ್‌ ಕಾರ್ಡ್‌ಗ ಗಳನ್ನು ವಿತರಿಸಲಾಗುವುದು. ಈ ಕಾರ್ಡ್‌ಗಳನ್ನು ಬಳಸಿ ಫಲಾನುಭವಿ ಕುಟುಂಬದವರು ಒಂದು ವರ್ಷಕ್ಕೆ ₨30 ಸಾವಿರದವರೆಗಿನ ಚಿಕಿತ್ಸಾ ವೆಚ್ಚವನ್ನು ನಿಗದಿತ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕಾಧಿಕಾರಿ ನಾಗರಾಜು ಮಾತನಾಡಿ ಈ ಯೋಜನೆಗೆ ಜಿಲ್ಲೆಯ 17 ಆಸ್ಪತ್ರೆಗಳೊಂದಿಗೆ ಒಡಂಬಡಿಕೆಯಾಗಿದೆ. ಈ ಯೋಜನೆಯ ಅವಧಿ 90 ದಿವಸ ಇರುತ್ತದೆ. ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಫಲಾನುಭವಿ ಕುಟುಂಬದ ಮುಖ್ಯಸ್ಥ ಹೆಂಡತಿ, ಗಂಡ, ಮಕ್ಕಳು ಹಾಗೂ ಅವಲಂಬಿತರೂ ಸೇರಿದಂತೆ ಒಟ್ಟು ಐದು ಮಂದಿ ಈ ಸೌಲಭ್ಯವನ್ನು ಪಡೆಯಬಹುದು ಎಂದರು.

ನೊಂದಣಿ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಕುಟುಂಬದ ಐದೂ ಸದಸ್ಯರೊಂದಿಗೆ ನಿಗದಿಪಡಿಸಲಾದ ಕಚೇರಿಗೆ ಹಾಜರಾಗಿ ನೊಂದಣಿ ಮಾಡಿಸಿಕೊಳ್ಳಬಹುದು. ಪ್ರತಿ ಕುಟುಂಬ ಸ್ಮಾರ್ಟ್‌ ಕಾರ್ಡ್‌ ಪಡೆಯಲು  ನೋಂದಣಿ ಹಣ ₨30 ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಆರ್.ಲತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್, ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯನರಸಿಂಹ, ವಿಮೆ ಕಂಪನಿಗಳ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.