ADVERTISEMENT

ವಿದ್ಯಾರ್ಥಿಗಳಿಂದ ‘ಕೃಷಿ ಭಾಗ್ಯ’ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 9:20 IST
Last Updated 27 ಜುಲೈ 2017, 9:20 IST

ರಾಮನಗರ: ಬಂಡೆಯೊಂದರ ಮೇಲೇರಿದ ವಿದೇಶಿ ವಿದ್ಯಾರ್ಥಿಗಳು ಅಲ್ಲಿಂದ ಮಳೆ ನೀರು ಹರಿದು ಕೃಷಿ ಹೊಂಡ ಸೇರುವ ಬಗೆಯನ್ನು ಕಂಡು ವಿಸ್ಮಿತರಾದರು. ಮಳೆ ಕೊರತೆ ನಡುವೆಯೂ ಹೇಗೆ ಬೆಳೆ ತೆಗೆಯುತ್ತಿದ್ದೀರಿ ಎಂದು ರೈತರನ್ನು ಪ್ರಶ್ನಿಸಿ ಮಾಹಿತಿ ಪಡೆದರು.

ಇಂತಹದ್ದೊಂದು ಸಮೀಕ್ಷೆಗೆ ಮುಂದಾಗಿದ್ದು ವಾಷಿಂಗ್‌ಟನ್‌ನ ಅಮೆರಿಕನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ತಾಲ್ಲೂಕಿನ ಬೊಮ್ಮಚನಹಳ್ಳಿಗೆ ಬುಧವಾರ ಭೇಟಿ ನೀಡಿದ್ದ ತಂಡವು ಇಲ್ಲಿನ ಕೃಷಿ ಭಾಗ್ಯ ಯೋಜನೆಯ ಕುರಿತು ಅಧ್ಯಯನ ಕೈಗೊಂಡಿತು.

11 ವಿದ್ಯಾರ್ಥಿಗಳು ಹಾಗೂ ಒಬ್ಬರು ಪ್ರಾಧ್ಯಾಪಕರನ್ನು ಒಳಗೊಂಡ ತಂಡವು ದೇಶದಲ್ಲಿನ ಆರ್ಥಿಕ ಮತ್ತು ಕೃಷಿ  ಪ್ರಗತಿಯ ಅಧ್ಯಯನಕ್ಕೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಇನ್‌ಸ್ಟಿಟ್ಯೂಟ್‌ ಫಾರ್ ಸೋಷಿಯಲ್ ಆಂಡ್‌ ಎಕಾನಾಮಿಕ್ ಚೇಂಜ್‌ ಸಂಸ್ಥೆಗೆ ಬಂದಿದೆ. ಈ ತಂಡವು ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಸಲಹೆಯಂತೆ ಇಲ್ಲಿನ ‘ಕೃಷಿ ಭಾಗ್ಯ’ ಯೋಜನೆಯ ಕುರಿತು ಅಧ್ಯಯನ ನಡೆಸುತ್ತಿದೆ.

ADVERTISEMENT

ಅಮೆರಿಕಾ ಜೊತೆಗೆ ಟರ್ಕಿ, ಕೃಷಿಭಾಗ್ಯ ಯೋಜನೆಯ ಅನುಷ್ಠಾನ ಹಾಗೂ ಸರ್ಕಾರ ನೀಡುತ್ತಿರುವ ಸವಲತ್ತುಗಳ ಬಗ್ಗೆ ತಂಡವು ಫಲಾನುಭವಿಗಳ ರೈತರೊಂದಿಗೆ ಚರ್ಚೆ ನಡೆಸುತ್ತಿದೆ. ಒಟ್ಟು 41 ಪ್ರಶ್ನೆಗಳ ಮೂಲಕ  ಮಾಹಿತಿ ಕಲೆ ಹಾಕುತ್ತಿದೆ.

‘ಒಟ್ಟು 12 ಸದಸ್ಯರು ಮೂರು ತಂಡಗಳಾಗಿ ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನ ಬೊಮ್ಮಚನಹಳ್ಳಿ ಜೊತೆಗೆ ಕನಕಪುರ ತಾಲೂಕಿನ ಛತ್ರ, ಮಾಗಡಿ ತಾಲ್ಲೂಕಿನ ಸೋಲೂರು ಸಮೀಪ ಇರುವ ಗ್ರಾಮಗಳಿಗೆ ತಂಡಗಳು ಭೇಟಿ ನೀಡಿದವು.

ಕೃಷಿಹೊಂಡ, ನೀರಾವರಿ, ಇಳುವರಿ, ಕೊಳವೆಬಾವಿಗಳ ನಿರ್ವಹಣೆ, ಸಹಾಯಧನ, ನೂತನ ಪದ್ಧತಿ ಅಳವಡಿಕೆ ಮೊದಲಾದ ಮಾಹಿತಿಗಳನ್ನು ಅವರು ರೈತರಿಂದ ಪಡೆಯುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೀಪಜಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.