ADVERTISEMENT

ವೈದ್ಯಕೀಯ ಸೇವೆ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:01 IST
Last Updated 14 ನವೆಂಬರ್ 2017, 9:01 IST

ರಾಮನಗರ: ಖಾಸಗಿ ವೈದ್ಯರ ‘ಬೆಳಗಾವಿ ಚಲೋ’ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳು ಸೋಮವಾರ ಬಾಗಿಲು ಮುಚ್ಚಿದ್ದು, ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಜಿಲ್ಲೆಯಿಂದ ಸುಮಾರು 40 ವೈದ್ಯರ ತಂಡವು ಈ ಚಳವಳಿಯಲ್ಲಿ ಪಾಲ್ಗೊಂಡಿದ್ದು, ಅವರು ಪ್ರತಿನಿಧಿಸುವ ಖಾಸಗಿ ನರ್ಸಿಂಗ್‌ ಹೋಮ್‌ಗಳು ಹಾಗೂ ಕ್ಲಿನಿಕ್‌ಗಳು ಸೇವೆಯನ್ನು ಸ್ಥಗಿತಗೊಳಿಸಿದ್ದವು. ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಎಂದಿನಂತೆ ವೈದ್ಯಕೀಯ ಸೇವೆ ಲಭ್ಯವಿತ್ತು. ಆದರೆ ಅಲ್ಲಿಯೂ ವೈದ್ಯರ ಕೊರತೆ ಕಾಡಿತು. ಕೆಲವು ಔಷಧ ಮಾರಾಟ ಅಂಗಡಿಗಳು ಹಾಗೂ ತಪಾಸಣಾ ಕೇಂದ್ರಗಳೂ ಮುಚ್ಚಿದ್ದವು.

ಸಣ್ಣಪುಟ್ಟ ಪರೀಕ್ಷೆಗಳು, ಆರೋಗ್ಯ ಸಂಬಂಧಿ ತೊಂದರೆಗಳ ತಪಾಸಣೆಗೆಂದು ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ತುಳಿದ ಜನರು ಈ ಚಳವಳಿಯಿಂದಾಗಿ ತೊಂದರೆ ಅನುಭವಿಸಿದರು. ಸಾಕಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತ ದೌಡಾಯಿಸಿದರು.

ADVERTISEMENT

ವೈದ್ಯರ ಕೊರತೆ ಕಾರಣ ಸರ್ಕಾರಿ ವೈದ್ಯರು ರಜೆ ಹೋಗದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚನೆ ಕೊಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಹಾಜರಿ ಹೆಚ್ಚಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಸೋಮವಾರ ಕೊಂಚ ಹೆಚ್ಚಳ ಕಂಡು ಬಂದಿತು.

‘ಜಿಲ್ಲೆಯ ಕೆಲವು ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ ಅಂತಹ ಆಸ್ಪತ್ರೆಗಳಲ್ಲಿ ಮಾತ್ರ ತೊಂದರೆ ಆಗಿದೆ. ಮಂಗಳವಾರ ವೈದ್ಯರು ಎಂದಿನಂತೆ ಸೇವೆಗೆ ಲಭ್ಯವಾಗಲಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಬಾರದು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.