ADVERTISEMENT

‘ಸರ್ಕಾರಿ ಶಾಲೆ ನಮ್ಮದೆಂಬ ಭಾವ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:12 IST
Last Updated 15 ನವೆಂಬರ್ 2017, 10:12 IST

ಜಾಲಮಂಗಲ (ರಾಮನಗರ): ‘ಶಾಲೆ ನಮ್ಮನ್ನು ಬೆಳೆಸಿದೆ, ಅದನ್ನು ನಾವು ಉಳಿಸಬೇಕು ಎನ್ನುವ ಭಾವನೆ ಜನರಲ್ಲಿ ಬರಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಮಕ್ಕಳ ಹಬ್ಬ ಹಾಗೂ ಶಾಲಾ ಕಾಲೇಜು ಶೈಕ್ಷಣಿಕ ಉತ್ಸವಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಜನರು ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಈ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ’ ಎಂದರು.

ADVERTISEMENT

“ಇಂತಹ ಶಾಲೆಯಲ್ಲಿ ಓದಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದವರು, ಹಳೆಯ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿಕೊಂಡು, ಶಾಲೆಗಳ ಅಭಿವೃದ್ಧಿಗೆ ಪೂರಕವಾಗಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಜಾಲಮಂಗಲದ ಸರ್ಕಾರಿ ಶಾಲೆ ಮಾದರಿಯಾಗಿದೆ. ಇಲ್ಲಿ ಸ್ಥಾಪನೆಯಾಗಿರುವ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ. ಇದೇ ರೀತಿ ನನ್ನ ವಿಧಾನ ಸಭಾ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿದರೆ ದೇಣಿಗೆ ನೀಡುತ್ತೇನೆ’ ಎಂದು ಪ್ರಕಟಿಸಿಸಿದರು.

ಉಪನ್ಯಾಸಕ ಜೆ.ಕೆ. ಅಪ್ಪಣ್ಣ ಮಾತನಾಡಿ ‘ಮಕ್ಕಳ ಮೇಲೆ ಪೋಷಕರಾಗಲಿ, ಶಿಕ್ಷಕರಾಗಲಿ ಒತ್ತಡ ಹೇರಬಾರದು. ವಿದ್ಯಾರ್ಥಿಗಳು ಅಂಕ ತೆಗೆಯುವ ಯಂತ್ರಗಳಲ್ಲ. ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್. ಸುಬ್ಬಶಾಸ್ತ್ರಿ ಮಾತನಾಡಿ ‘ಜಾಲಮಂಗಲದ ಸರ್ಕಾರಿ ಪ್ರಾಥಮಿಕ ಶಾಲೆಗೆ 110, ಸರ್ಕಾರಿ ಪ್ರೌಢಶಾಲೆಗೆ 65 ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 25 ವರ್ಷವಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್‌. ಅಶೋಕ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಜಾಲಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಡಿಡಿಪಿಯು ರತ್ನಮ್ಮ, ಡಿಡಿಪಿಐ ಎಂ.ಎಚ್. ಗಂಗಮಾರೇಗೌಡ, ಡಯಟ್ ಉಪನಿರ್ದೇಶಕ ಎಚ್.ವಿ. ಕೆಂಪರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್. ಸಂಪತ್‌ಕುಮಾರ್, ಮುಖಂಡರಾದ ಎಚ್. ಶಿವಪ್ರಸಾದ್, ತಡಿಕವಾಗಲು ರಾಮಣ್ಣ, ನಾಗಣ್ಣ, ಎಸ್. ನಾಗಭೂಷಣ್‌, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಬಿ. ಭಾರತಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ. ಶಿವಶಂಕರ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ. ಶಿವರಾಮ್‌, ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಆರ್. ರೇವಣ್ಣ, ಎಸ್. ಜಗದೀಶ್, ಜೆ.ಎಸ್. ಪುಟ್ಟಸ್ವಾಮಿ, ನಾಗರಾಜ್, ಸಿ. ಕುಮಾರಸ್ವಾಮಿ, ಜೆ.ಪಿ. ಗಿರೀಶ್, ಸಿ. ಕುಮಾರಸ್ವಾಮಿ, ಪುಟ್ಟಮಾರೇಗೌಡ, ಪುಟ್ಟಗೌರಮ್ಮ ಇದ್ದರು.

ಜಾಲಮಂಗಲ ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಹಳೆಯ ವಿದ್ಯಾರ್ಥಿಗಳ ಸಂಯುಕ್ತ ಸಂಘದ ವತಿಯಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

* * 

ಸರ್ಕಾರಿ ಶಾಲೆ ಶಿಕ್ಷಕರು ಉತ್ತಮ ಫಲಿತಾಂಶ ಬರುವಂತೆ ಕಾರ್ಯ ನಿರ್ವಹಿಸಬೇಕು. ಶಾಲೆಗಳ ಬಗೆಗಿರುವ ಅಸಡ್ಡೆ ಹೋಗಲಾಡಿಸಬೇಕು
ಎಚ್‌.ಸಿ. ಬಾಲಕೃಷ್ಣ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.