ADVERTISEMENT

ಸಾಗುವಳಿದಾರರ ಸಹಕಾರ ಅಗತ್ಯ

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಬಾಲಕೃಷ್ಣ ಮನವಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:23 IST
Last Updated 25 ಮಾರ್ಚ್ 2017, 8:23 IST
ಮಾಗಡಿಯಲ್ಲಿ ಶುಕ್ರವಾರ ನಡೆದ ಬಗರ್ ಹುಕುಂ  ಸಮಿತಿ ಸಭೆಯಲ್ಲಿ  ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು. ತಹಶೀಲ್ದಾರ್‌ ಲಕ್ಷ್ಮೀಚಂದ್ರ ಇದ್ದರು
ಮಾಗಡಿಯಲ್ಲಿ ಶುಕ್ರವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು. ತಹಶೀಲ್ದಾರ್‌ ಲಕ್ಷ್ಮೀಚಂದ್ರ ಇದ್ದರು   

ಮಾಗಡಿ: ಭೂರಹಿತ ಕೃಷಿಕರು ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದ ಬಗರ್ ಹುಕುಂ ಜಮೀನನ್ನು ಸರ್ವೆಕಾರ್ಯ ನಡೆಸಲು ಅಧಿಕಾರಿಗಳು ಬಂದಾಗ ಬಗರ್‌ ಹುಕುಂ ಸಾಗುವಳಿದಾರರು ಸ್ಥಳದಲ್ಲಿದ್ದು, ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ  ಶುಕ್ರವಾರ ನಡೆದ ಬಗರ್ ಹುಕುಂ  ಸಮಿತಿ  ಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಂದ ಮನವಿ ಸ್ವೀಕರಿಸಿ  ಅವರು ಮಾತನಾಡಿದರು.

ತಾಲ್ಲೂಕಿನ ಕುದೂರು, ಮಾಡಬಾಳ್, ತಿಪ್ಪಸಂದ್ರ, ಕಸಬ ಹೋಬಳಿಗಳಲ್ಲಿ ಬಗರ್ ಹುಕುಂ ಸಾಗುವಳಿಯ ಹಕ್ಕುಪತ್ರ ಪಡೆಯಲು 6 ಸಾವಿರ ಸಾಗುವಳಿದಾರರು ಭೂಮಿ ಸಕ್ರಮಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಮೊದಲು ಕುದೂರು ಹೋಬಳಿಯಲ್ಲಿ ಬಗರ್‌ ಹುಕುಂ ಸಾಗುವಳಿ ಮಾಡಿರುವವರ ಭೂಮಿಯನ್ನು ಸರ್ವೆ ಮಾಡಿಸಲು 8 ಜನ ಭೂಮಾಪನಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಬಗರ್‌ ಹುಕುಂ ಭೂಮಿಯನ್ನು  ಸರ್ವೆ ಮಾಡಿ, ನಕ್ಷೆ ಸಮೇತ ಸಮಿತಿ ಮುಂದೆ ಇಟ್ಟು ಅನುಮೋದನೆ ಪಡೆಯಬೇಕು. ನಂತರ ಕ್ರಮವಾಗಿ ಮಾಡಬಾಳ್, ಕಸಬ ಹಾಗೂ ತಿಪ್ಪಸಂದ್ರ ಹೋಬಳಿಗಳಲ್ಲಿ ಬಗರ್‌ ಹುಕುಂ ಭೂಮಿ ಸರ್ವೆಕಾರ್ಯ ಕೈಗೆತ್ತಿಕೊಳ್ಳುವಂತೆ ಶಾಸಕರು ತಿಳಿಸಿದರು.

ಬಗರ್‌ ಹುಕುಂ ಸಮಿತಿಯ ಸದಸ್ಯ ದೊಡ್ಡಯ್ಯ ಮಾತನಾಡಿ ಭೂಮಿ ಇಲ್ಲದ ರೈತರು ಬಗರ್‌ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.

ಸಮಿತಿಯ ಸದಸ್ಯರಾದ ಶಿವಣ್ಣ, ದೇವರಾಜಮ್ಮ ಮುಕುಂದ, ತಹಶೀಲ್ದಾರ್ ಎನ್.ಲಕ್ಷ್ಮೀಚಂದ್ರ, ಉಪತಹಶೀಲ್ದಾರ್‌ ಡಿ.ಟಿ.ಮಂಜುನಾಥ್, ಕಚೇರಿಯ ಶಿರಸ್ತೇದಾರ್‌ ಸೋಮಶೇಖರ್‌, ಭೂಮಾಪನಾಧಿಕಾರಿ ತಿಮ್ಮಯ್ಯ, ಕಂದಾಯ ಇಲಾಖೆಯ ಮಂಜುನಾಥ್, ಶಿವಸ್ವಾಮಿ, ರಮೇಶ್, ಗಂಗಾಧರ್, ಶಿವರುದ್ರಯ್ಯ, ಗಂಗಮಾರಯ್ಯ, ನಾರಾಯಣಸ್ವಾಮಿ, ರವಿಕುಮಾರ್, ವಲಯ ಅರಣ್ಯ ಅಧಿಕಾರಿ ದಾಳೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT